ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರ ಹಿಂಸಾಚಾರ ಪೀಡಿತ ಪ್ರದೇಶಕ್ಕೆ INDIAದ 16 ಪಕ್ಷಗಳ 20 ಸಂಸದರ ನಿಯೋಗವನ್ನು ರಾಜ್ಯಕ್ಕೆ ಕಳುಹಿಸಲು ಪ್ರತಿಪಕ್ಷಗಳು ನಿರ್ಧರಿಸಿವೆ.
ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ 20 ಸಂಸದರ ನಿಯೋಗವು ಮಣಿಪುರದಲ್ಲಿದ್ದು, ಅಲ್ಲಿನ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸಿ, ರಾಜ್ಯದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಸಂಸತ್ತಿಗೆ ಶಿಫಾರಸುಗಳನ್ನು ಮಾಡಲಿದೆ.
ಭೇಟಿಗೂ ಮುನ್ನ ಕಾಂಗ್ರೆಸ್ ಸಂಸದ ಡಾ.ನಾಸೀರ್ ಹುಸೇನ್ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮಣಿಪುರಕ್ಕೆ ಸಂಸದರ ನಿಯೋಗವನ್ನು ಕಳುಹಿಸುವ ಪ್ರತಿಪಕ್ಷಗಳ ನಿರ್ಧಾರವು ರಾಜ್ಯದ ಸಂತ್ರಸ್ತ ಜನರ ಸಂಕಷ್ಟದ ಕುರಿತು ಇವರಿಗೆ ಕಳವಳವಿದೆ ಎಂಬ ಸಂದೇಶವನ್ನು ಕಳುಹಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಲೋಕಸಭೆ ಮತ್ತು ರಾಜ್ಯಸಭೆ ಎರಡರಿಂದಲೂ ಸಂಸದರನ್ನು ಹೊಂದಿರುವ ಇಪ್ಪತ್ತು ಸದಸ್ಯರ ಸಂಸದರ ನಿಯೋಗದಲ್ಲಿ ಕೆ ಸುರೇಶ್, ಅಧೀರ್ ರಂಜನ್ ಚೌಧರಿ, ಗೌರವ್ ಗೊಗೊಯ್, ರಾಜೀವ್ ರಂಜನ್ ಲಾಲನ್ ಸಿಂಗ್, ಸುಶ್ಮಿತಾ ದೇವ್, ಕನಿಮೋಳಿ ಕರುಣಾನಿಧಿ, ಸಂತೋಷ್ ಕುಮಾರ್, ಎಎ ರಹೀಮ್, ಪ್ರೊ.ಮನೋಜ್ ಕುಮಾರ್ ಝಾ, ಜಾವೇದ್ ಅಲಿ ಖಾನ್, ಮಹುವಾ ಮಜಿ, ಪಿಪಿ ಮೊಹಮ್ಮದ್ ಫೈಜಲ್, ಅನೀಲ್ ಪ್ರಸಾದ್ ಹೆಗ್ಡೆ, ಇಟಿ ಮೊಹಮ್ಮದ್ ಬಶೀರ್, ಎನ್ಕೆ ಪ್ರೇಮಚಂದ್ರನ್, ಸುಶೀಲ್ ಗುಪ್ತಾ, ಅರವಿಂದ್ ಸಾವಂತ್, ಡಿ ರವಿಕುಮಾರ್, ತಿರುಮಾವಳವನ್, ಜಯಂತ್ ಸಿಂಗ್ ಮತ್ತು ಫುಲೋ ದೇವಿ ನೇತಮ್ ಇದ್ದಾರೆ.