ಇಸ್ಲಾಂಗೆ ಮತಾಂತರಗೊಂಡ ಅಂಜುಗೆ ಜಾಗ, ಹಣ ಕೊಟ್ಟ ಪಾಕ್ ಉದ್ಯಮಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತನ್ನ ಪತಿಯನ್ನು ರಾಜಸ್ಥಾನದ ಅಲ್ವಾರ್‌ನಲ್ಲಿಯೇ ಬಿಟ್ಟು ಫೇಸ್‌ಬುಕ್‌ ಗೆಳೆಯ ಭೇಟಿಗಾಗಿ ಪಾಕಿಸ್ತಾನಕ್ಕೆ ಭಾರತೀಯ ಮಹಿಳೆ ಅಂಜು ತೆರಳಿದ್ದಾಳೆ.

ಈ ಸುದ್ದಿ ದೇಶದೆಲ್ಲೆಡೆ ಹರಿದಾಡುತ್ತಿದ್ದಂತೆ ಅಂಜು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರವಾಗಿ ಫಾತಿಮಾ ಆಗಿದ್ದಾಳೆ.
ಇದೀಗ ಪಾಕಿಸ್ತಾನಕ್ಕೆ ಬಂದು ಮತಾಂತರಗೊಂಡ ಈಕೆಗೆ, ಪಾಕ್ ಸ್ಟಾರ್ ಗ್ರೂಪ್ ಆಫ್ ಕಂಪನಿಗಳ ಸಿಇಒ ಮೊಹ್ಸಿನ್ ಖಾನ್ ಅಬ್ಬಾಸಿ ಅವರು 10 ಮಾರ್ಲಾ ವಸತಿ ಭೂಮಿ, 50 ಸಾವಿರ ರೂಪಾಯಿಯ ಪಾಕಿಸ್ತಾನಿ ಚೆಕ್‌ ಹಾಗೂ ಇತರ ಕೆಲ ಉಡುಗೊರೆಯನ್ನು ನೀಡಿದ್ದಾರೆ.

ಈ ಉಡುಗೊರೆಗಳು ಈಗ ಫಾತಿಮಾ ಆಗಿ ಮತಾಂತರಗೊಂಡಿರುವ ಅಂಜುಗೆ ಪಾಕಿಸ್ತಾನ ತಮ್ಮದೇ ಮನೆ ಎಂಬಂತೆ ಭಾಸವಾಗುವಂತೆ ಮಾಡುತ್ತದೆ ಎಂದು ಖಾನ್ ಹೇಳಿದ್ದಾರೆ. ಮೊಹ್ಸಿನ್ ಖಾನ್ ಅಬ್ಬಾಸಿ ಅವರು ಅಂಜು ಮತ್ತು ನಸ್ರುಲ್ಲಾ ಅವರೊಂದಿಗೆ ಸಂವಾದ ನಡೆಸಿ ನಂತರ ಉಡುಗೊರೆಗಳ ಕುರಿತು ಹೇಳಿಕೆ ನೀಡುವ ವಿಡಿಯೊ ವೈರಲ್ ಆಗಿದೆ.

‘ಅಂಜು ಭಾರತದಿಂದ ಇಲ್ಲಿಗೆ ಬಂದು ಇಸ್ಲಾಂಗೆ ಮತಾಂತರಗೊಂಡಿದ್ದಾಳೆ. ಆದ್ದರಿಂದ ಈ ಉಡುಗೊರೆಗಳು ಅವಳನ್ನು ಸ್ವಾಗತಿಸುವ ಸಲುವಾಗಿ ನೀಡುತ್ತಿದ್ದೇವೆ. ನಾವು ಅಪಾರವಾಗಿ ಸಂತೋಷವಾಗಿರುವುದರಿಂದ ಅವಳನ್ನು ಅಭಿನಂದಿಸಿದ್ದೇವೆ. ಇದು ಅವಳನ್ನು ಪ್ರಶಂಸಿಸಲು ಒಂದು ಸಣ್ಣ ಪ್ರಯತ್ನವಾಗಿದೆ” ಎಂದು ಮೊಹ್ಸಿನ್ ಖಾನ್ ಅಬ್ಬಾಸಿ ಹೇಳಿದ್ದಾರೆ.

ಯಾರಾದರೂ ಹೊಸ ಸ್ಥಳಕ್ಕೆ ಬಂದಾಗ ಅವರಿಗೆ ಎದುರಾಗುವ ವಸತಿ ಸಮಸ್ಯೆ ಎದುರಾಗುತ್ತೆ. ನಮ್ಮ ಒಂದು ಪ್ರಾಜೆಕ್ಟ್‌ ಚಾಲ್ತಿಯಲ್ಲಿರುವ ಕಾರಣ, ಅಂಜುಗೆ ಒಂದು ವಸತಿ ನೀಡುವ ತೀರ್ಮಾನ ಮಾಡಿದ್ದೇವೆ. ನಮ್ಮ ಆಡಳಿತ ಮಂಡಳಿ ನಿರ್ದೇಶಕರು ಕೂಡ ಇದನ್ನು ಒಪ್ಪಿದ್ದಾರೆ. ಹಾಗಾಗಿ ಆಕೆಯ ಹೆಸರಿಗೆ ಜಾಗವನ್ನು ನೀಡಲು ತೀರ್ಮಾನ ಮಾಡಿದ್ದೇವೆ. ಉಳಿದೆಲ್ಲವೂ ಸಣ್ಣ ಸಣ್ಣ ಉಡುಗೊರೆಗಳು. ಇಸ್ಲಾಂಗೆ ಮತಾಂತರವಾಗಿದ್ದರಿಂದ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಅದನ್ನು ನೀಡಿದ್ದೆವೆ. ಇದನ್ನು ತನ್ನ ಮನೆಯೆಂದೇ ಆಕೆ ಭಾವಿಸಬೇಕು’ ಎಂದು ಮೋಹ್ಶಿನ್‌ ಖಾನ್‌ ಅಬ್ಬಾಸಿ ಹೇಳಿದ್ದಾರೆ.

ಇನ್ನು ಅಂಜುವಿಗೆ ಭಾರತದಲ್ಲಿ ಪತಿ ಇದ್ದು, ವಿಚ್ಛೇದನ ಕೂಡ ಆಗಿಲ್ಲ. 2007ರಲ್ಲಿ ನಾವಿಬ್ಬರೂ ಮದುವೆಯಾಗಿದ್ದು ಮಗಳು ಕೂಡ ಇದ್ದಾಳೆ ಎಂದು ಅರವಿಂದ್‌ ಹೇಳಿದ್ದು, ಇನ್ನು ಮುಂದೆ ಆಕೆ ನನ್ನ ಮಗಳಿಗೆ ತಾಯಿಯಲ್ಲ ಎಂದು ಹೇಳಿದ್ದಾರೆ.

ಜುಲೈ 20 ರಂದು ಗೆಳತಿಯರನ್ನು ಭೇಟಿಯಾಗುವ ಸಲುವಾಗಿ ಜೈಪುರಕ್ಕೆ ಹೋಗುತ್ತಿರುವುದಾಗಿ ಆಕೆ ಮನೆಯಿಂದ ತೆರಳಿದ್ದಳು. ಆ ಬಳಿಕ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ದಾಟಿದ್ದಾಳೆ ಎನ್ನುವ ಮಾಹಿತಿ ನಮ್ಮ ಕುಟುಂಬಕ್ಕೆ ಸಿಕ್ಕಿತ್ತು. ಆ ನಂತರವೇ ಆಕೆ ಅಲ್ಲಿ ನಸ್ರುಲ್ಲಾ ಎನ್ನುವ ವ್ಯಕ್ತಿಯನ್ನು ಮದುವೆಯಾಗಿರುವ ಫೋಟೋ ಹಾಗೂ ವಿಡಿಯೋಗಳು ಬಿತ್ತರವಾಗಿದ್ದವು. ಮೂರು ವರ್ಷಗಳ ಹಿಂದೆ ದೆಹಲಿಯಲ್ಲಿ ತಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದು ಅಂಜು ಹೇಳಿದ್ದರಾದರೂ, ನನಗೆ ಇನ್ನೂ ಆ ಬಗ್ಗೆ ನೋಟಿಸ್‌ ಬಂದಿಲ್ಲ ಎಂದಿದ್ದಾರೆ. 2019ರಲ್ಲಿ ಫೇಸ್‌ಬುಕ್‌ ಮೂಲಕ ತನಗಿಂತ ಐದು ವರ್ಷ ಕಿರಿಯನಾಗಿರುವ ನಸ್ರುಲ್ಲಾರನ್ನು 34 ವರ್ಷದ ಅಂಜು ಭೇಟಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!