ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಲೆಗೆ ಕಾರು ಉರುಳಿ ಬಿದ್ದ ಪರಿಣಾಮ ನಾಲ್ವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದಿದೆ.
ಟಿ. ನರಸೀಪುರ ತಾಲೂಕು ಗೊರವನಹಳ್ಳಿ ಗ್ರಾಮದ ದೊಡ್ಡಯ್ಯ ಎಂಬುವರ ಪತ್ನಿ ಮಹದೇವಮ್ಮ, ಸಂಬಂಧಿಕಾರದ ರೇಖಾ, ಸಂಜನಾ, ಮಹದೇವಿ ಮೃತ ದುರ್ದೈವಿಗಳು.
ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಗ್ರಾಮದ ಹೊರವಲಯದ ತುರುಗನೂರು ಬ್ರಾಂಚ್ನ ವಿಶ್ವೇಶ್ವರಯ್ಯ ಉಪ ನಾಲೆಗೆ ಕಾರು ಉರುಳಿ ಬಿದ್ದು, ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ದೊಡ್ಡಮುಲಗೂಡು ಮತ್ತು ಗಾಮನಹಳ್ಳಿ ನಡುವೆ ಶನಿವಾರ ರಾತ್ರಿ 8.30ಕ್ಕೆ ಈ ಅವಘಡ ಸಂಭವಿಸಿದೆ.
ಮಹದೇವಮ್ಮ ಅವರ ಕುಟುಂಬದವರು ಆದಿಚುಂಚನಗಿರಿಯಲ್ಲಿ ಇಟ್ಟುಕೊಂಡಿದ್ದ ದೇವತಾ ಕಾರ್ಯಕ್ಕೆ ನೆಂಟರನ್ನು ಆಹ್ವಾನಿಸಲು ಗೊರವನಹಳ್ಳಿಯಿಂದ ದೊಡ್ಡಮಲಗೂಡಿಗೆ ಚಾಲಕ ಸೇರಿ ಐದು ಮಂದಿ ಹೋಗುತ್ತಿದ್ದರು. ಈ ವೇಳೆ ನಾಲೆಗೆ ತಡೆಗೋಡೆ ಇಲ್ಲದ ಕಾರಣ ಕತ್ತಲಲ್ಲಿ ಚಾಲಕನ ಕಣ್ತಪ್ಪಿ ಕಾರು ನಾಲೆಗೆ ಉರುಳಿಬಿದ್ದಿದೆ. ಆಗ ನಾಲ್ಕು ಮಹಿಳೆಯರು ಸಾವನ್ನಪ್ಪಿ, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಾಲೆಯಿಂದ ನಾಲ್ವರು ಮಹಿಳೆಯರ ಮೃತದೇಹವನ್ನು ಹೊರತೆಗೆಯಲಾಗಿದೆ. ಘಟನೆ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.