ಹೊಸದಿಗಂತ ವರದಿ ಪುತ್ತೂರು:
ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಇರಿಸಿ ಹಿಂದೂ ಯುವತಿಯಾದ ಚಿತ್ರೀಕರಣ ಮಾಡುತ್ತಿದ್ದ ಘಟನೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪುತ್ತೂರು ಘಟಕದ ಆಶ್ರಯದಲ್ಲಿ ಇಂದು ಪುತ್ತೂರಿನ ನೆಹರು ನಗರದಲ್ಲಿ ರಸ್ತೆ ಬದಿ ಧರಣಿ ಕುಳಿತು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಹಿಂದೂ ಯುವತಿಯರ ಚಿತ್ರೀಕರಣ ಮಾಡುತ್ತಿದ್ದ ಘಟನೆಯ ಹಿಂದೆ ಬೃಹತ್ ಜಾಲ ಸಕ್ರಿಯವಾಗಿದ್ದು, ಇದರ ಬಗ್ಗೆ ಸೂಕ್ತ ತನಿಖೆ ನಡೆಸದೆ ಹಾದಿ ತಪ್ಪಿಸಲಾಗುತ್ತಿದೆ. ಚಿತ್ರೀಕರಣ ನಡೆಸಿದ ಆರೋಪಿತ ಮೂವರು ಅನ್ಯ ಕೋಮಿನ ಯುವತಿಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಭಾವಿಪದ ಪುತ್ತೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀರಾಮ, ಎಬಿವಿಪಿ ಜಿಲ್ಲಾ ಸಂಚಾಲಕಿ ಮಂದಾರ, ದಕ್ಷಿಣ ಪ್ರಾಂತ ಪ್ರಮುಖ ನಿಶಾನ್ ಆಳ್ವ, ರಾಜ್ಯ ಸಾಮಾಜಿಕ ಜಾಲತಾಣ ಪ್ರಮುಖ ದಿನೇಶ್ ಕೊಯ್ಲಾ, ಶ್ರೀಜಿತ್, ಭುವನ್, ಚೇತನ್, ಸೂರ್ಯ, ಮನೀಶ್, ಕೀರ್ತನ್, ಗಗನ್ ದೀಪ್ ಮತ್ತಿತರ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.