ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದಲ್ಲಿ ಹಲವಾರು ವ್ಯಕ್ತಿಗಳ ಬಯೋಪಿಕ್‌ಗಳು ಬೆಳ್ಳಿತೆರೆ ಮೇಲೆ ಮೂಡಿಬಂದಿವೆ. 2019ರಲ್ಲಿ ನರೇಂದ್ರ ಮೋದಿ ಅವರ ಬಯೋಪಿಕ್ ಪಿ ಎಂ ನರೇಂದ್ರ ಮೋದಿ ತೆರೆಗೆ ಬಂದಿತ್ತು. ಅಲ್ಲದೇ 2021ರಲ್ಲಿ ತಮಿಳುನಾಡಿನ ಕ್ರಾಂತಿಕಾರಿ ರಾಜಕಾರಣಿ ಜಯಲಲಿತಾ ಅವರ ಬಯೋಪಿಕ್ ತಲೈವಿ ಸಹ ಬಿಡುಗಡೆಯಾಗಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಸಿನಿಮಾವನ್ನು ತೆರೆ ಮೇಲೆ ತರಲು ಭರದ ಸಿದ್ಧತೆಗಳು ನಡೆದಿವೆ.
ಮಾರ್ಚ್ 30ರಂದು ಈ ಚಿತ್ರದ ಕುರಿತು ಪೋಸ್ಟರ್ ಸಹ ಬಿಡುಗಡೆಗೊಂಡಿತ್ತು. ಚಿತ್ರಕ್ಕೆ ಲೀಡರ್ ರಾಮಯ್ಯ ಎಂದು ಹೆಸರಿಡಲಾಗಿದ್ದು, ಕಿಂಗ್ ರೈಸ್ಡ್ ಬೈ ದ ಪೀಪಲ್ ಎಂಬ ಅಡಿಬರಹವನ್ನು ಬರೆಯಲಾಗಿತ್ತು. ಈ ಚಿತ್ರಕ್ಕೆ ನಿರ್ದೇಶಕ ಸತ್ಯರತ್ನಂ ನಿರ್ದೇಶನ ಹಾಗೂ ಚಿತ್ರಕಥೆ ಇದ್ದು, ಎಂ ಎಸ್ ಕ್ರಿಯೇಟಿವ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದೆ.
ಇನ್ನು ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತಯಾರಾಗಲಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ. ಈ ಚಿತ್ರದಲ್ಲಿ ಸಿದ್ದರಾಮಯ್ಯ ಅವರ ಪಾತ್ರವನ್ನು ತಮಿಳಿನ ಪ್ರತಿಭಾವಂತ ನಟ ವಿಜಯ್ ಸೇತುಪತಿ ನಿರ್ವಹಿಸಲಿದ್ದಾರೆ ಎಂಬುವುದನ್ನು ಮೂಲಗಳು ತಿಳಿಸಿವೆ.
ಇನ್ನು ಲೀಡರ್ ರಾಮಯ್ಯ ಚಿತ್ರ ಎರಡು ಭಾಗಗಳಲ್ಲಿ ಬರಲಿದ್ದು, ಮೊದಲ ಭಾಗದಲ್ಲಿ ಸಿದ್ದರಾಮಯ್ಯನವರ ಬಾಲ್ಯ, ಕಾಲೇಜು ಹಾಗೂ ವಕೀಲರಾಗಿದ್ದ ಕಥೆಯನ್ನು ತೋರಿಸಲಿದ್ದಾರೆ. ಈ ಭಾಗದಲ್ಲಿ ಬಾಲ್ಯದ ಹಾಗೂ ಕಾಲೇಜು ದಿನಗಳಲ್ಲಿ ಬಾಲ ನಟ ಹಾಗೂ ಬೇರೊಬ್ಬ ನಟ ಸಿದ್ದರಾಮಯ್ಯರಾಗಿ ಕಾಣಿಸಿಕೊಳ್ಳಲಿದ್ದು, ಲಾಯರ್ ಗೆಟಪ್‌ಗೆ ವಿಜಯ್ ಸೇತುಪತಿ ಬಣ್ಣ ಹಚ್ಚಲಿದ್ದಾರೆ.