ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾ ರೈಲು ಅಪಘಾತ ಸಂಭವಿಸಿ ಎರಡು ತಿಂಗಳು ಕಳೆದರೂ ಇನ್ನೂ 29 ಮೃತದೇಹಗಳನ್ನು ಗುರುತಿಸಲಾಗಿಲ್ಲ. ಮೃತ ದೇಹಗಳನ್ನು ಐದು ಕಂಟೈನರ್‌ಗಳಲ್ಲಿ ಭುವನೇಶ್ವರ ಏಮ್ಸ್‌ನಲ್ಲಿ ಇರಿಸಲಾಗಿದೆ. ಇದುವರೆಗೂ 266 ಮೃತ ದೇಹಗಳನ್ನು ಮೃತರ ಸಂಬಂಧಿಕರಿಗೆ ಹಸ್ತಾಂತರಿಸಿದ್ದು, ಉಳಿದವುಗಳು ಅನಾಥವಾಗಿವೆ. ಟ್ರಿಪಲ್ ರೈಲು ಅಪಘಾತದಲ್ಲಿ ಸಾವನ್ನಪ್ಪಿದ 295 ಜನರಲ್ಲಿ 29 ಮೃತದೇಹಗಳು ಇನ್ನೂ ಗುರುತಿನ ನಿರೀಕ್ಷೆಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಮ್ಸ್ ಭುವನೇಶ್ವರ್ ಅಧೀಕ್ಷಕ ಪ್ರೊಫೆಸರ್ ದಿಲೀಪ್ ಕುಮಾರ್ ಪರಿದಾ ಮಾತನಾಡಿ, ಜೂನ್ 2ರ ರೈಲು ಅಪಘಾತದ ನಂತರ, ಅಪಘಾತದ ಸ್ಥಳದಿಂದ ಒಟ್ಟು 162 ಮೃತದೇಹಗಳನ್ನು ಹೊರತೆಗೆಯಲಾಯಿತು. ಅವುಗಳಲ್ಲಿ 81 ಅನ್ನು ಮೊದಲ ಹಂತದಲ್ಲಿ ಅವರ ಕುಟುಂಬ ಸದಸ್ಯರಿಗೆ ನೀಡಲಾಗಿದೆ. ಡಿಎನ್ಎ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಇನ್ನೂ 52ಮೃತ ದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು.
ನಿಯಮಗಳ ಪ್ರಕಾರ ಹಕ್ಕುದಾರರ ಡಿಎನ್‌ಎಗೆ ಹೊಂದಿಕೆಯಾಗದ ಮೃತ ದೇಹಗಳನ್ನು ಯಾರಿಗೂ ನೀಡಲಾಗುವುದಿಲ್ಲ ಎಂದರು. ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಸೇರಿದಂತೆ ಮೂರು ರೈಲುಗಳು ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ದೊಡ್ಡ ದುರಂತದಲ್ಲಿ 295 ಜನರು ಸಾವನ್ನಪ್ಪಿ, 1200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.