‘ಗ್ಯಾರಂಟಿಯಿಂದ ರಾಜ್ಯದ ಖಜಾನೆ ಖಾಲಿ’ ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಉಚಿತ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಖಜಾನೆ ಬರಿದಾಗುವುದರೊಂದಿಗೆ ಅಭಿವೃದ್ದಿಗೆ ಹಣ ಇಲ್ಲದಂತಾಗಿದೆ ಎಂದು ಕಾಳಜಿ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಸ್ವಾರ್ಥಕ್ಕಾಗಿ ಘೋಷಿಸಿದ ಗ್ಯಾರಂಟಿ ಯೋಜನೆ ಜಾರಿಯಿಂದ ಕರ್ನಾಟಕ ಸರ್ಕಾರದ ಬಳಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂಬ ಪ್ರಧಾನಿ ಮೋದಿ ಟೀಕೆಗೆ ಸಿಎಂ ಪ್ರತಿಕ್ರಿಯಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರೇ, ಇದು ನಿಮ್ಮ ವೈಯಕ್ತಿಕ ಅಭಿಪ್ರಾಯವೇ, ಪ್ರಧಾನಿಯವರ ಅಭಿಪ್ರಾಯವೇ? ಇಲ್ಲವೆ ಪಕ್ಷದ ಅಭಿಪ್ರಾಯವೇ? ಎನ್ನುವುದನ್ನು ದಯವಿಟ್ಟು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವುದಾದರೆ ನಿಮ್ಮ ಮತ್ತು ನಿಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿ. ಕರ್ನಾಟಕದ ಬಿಜೆಪಿ ನಾಯಕರಿಗೂ ನಮ್ಮ ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕವಾಗಿ ವಿರೋಧಿಸಲು ನಿರ್ದೇಶನ ನೀಡಿ. ಮುಂದಿನ ಲೋಕಸಭಾ ಚುನಾವಣೆಯನ್ನು ಗ್ಯಾರಂಟಿ ಯೋಜನೆಗಳ ವಿಷಯವನ್ನೇ ಮುಂದಿಟ್ಟುಕೊಂಡು ಎದುರಿಸಲು ನಾವು ಸಿದ್ಧರಿದ್ದೇವೆ, ನೀವು ಸಿದ್ಧರಿದ್ದರೆ ಹಾಗೆಂದು ಘೋಷಿಸಿಬಿಡಿ ಎಂದು ಹೇಳಿದರು.

ವಿಧಾನಸಭಾ ಚುನಾವಣೆ ಎದುರಿಸಲಿರುವ ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಹೆಣ್ಣುಮಕ್ಕಳ ಖಾತೆಗೆ ಮಾಸಿಕ 1000 ರೂಪಾಯಿ ಜಮೆ ಮಾಡುವ ಲಾಡ್ಲಿ-ಬೆಹನಾ ಯೋಜನೆಯ ಘೋಷಣೆ ಮಾಡಿದ್ದಾರೆ. ಇದನ್ನು 3000 ರೂಪಾಯಿಗೆ ಹೆಚ್ಚಿಸುವ ಭರವಸೆ ನೀಡಿದ್ದಾರೆ. ಇದು ಉಚಿತ ಯೋಜನೆ ಅಲ್ಲವೇ?

ಕೇಂದ್ರ ಸರ್ಕಾರದ್ದೇ ಯೋಜನೆಯಾಗಿರುವ ರೈತರ ಖಾತೆಗೆ ವಾರ್ಷಿಕ ಆರು ಸಾವಿರ ರೂಪಾಯಿಗಳನ್ನು ಜಮೆ ಮಾಡುವ ಕಿಸಾನ್ ಸಮ್ಮಾನ್ ಯೋಜನೆಯನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ? ನಾನು ಐದು ಕಿಲೋ ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡಿದರೆ ಅದರಿಂದ ರಾಜ್ಯದ ಖಜಾನೆ ಬರಿದಾಗಲಿದೆ ಎನ್ನುವುದು ನಿಮ್ಮ ಅಭಿಪ್ರಾಯವಾಗಿದ್ದರೆ, ಐದು ಕಿಲೋ ಅಕ್ಕಿಯನ್ನು ಉಚಿತವಾಗಿ ನೀಡುವ ಪಿಎಂ ಗರೀಬ್ ಅನ್ನ ಕಲ್ಯಾಣ ಯೋಜನೆಯನ್ನು ಯಾವ ಗುಂಪಿಗೆ ಸೇರಿಸುತ್ತೀರಿ? ಎಂದು ಕೇಳಿದ್ದಾರೆ.

ಡಬಲ್ ಎಂಜಿನ್ ಸರ್ಕಾರದ ಜನವಿರೋಧಿ ಆಡಳಿತದಿಂದ ಬೇಸತ್ತು ಹೋಗಿರುವ ಕರ್ನಾಟಕದ ಜನತೆ ನಮ್ಮ ಗ್ಯಾರಂಟಿ ಯೋಜನೆಗಳಿಗೆ ಜನಾದೇಶವನ್ನು ನೀಡಿ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ನುಡಿದಂತೆ ನಡೆಯುವ ಬದ್ಧತೆ ಹೊಂದಿರುವ ನಾವು ಕೊಟ್ಟ ಭಾಷೆಯನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!