ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಕಾಂಗ್ರೆಸ್ ಸಭೆಯಲ್ಲಿ ಹೆಚ್ಚು ಸೂಟ್‍ಕೇಸ್ ತುಂಬಿಸುವ ಟಾರ್ಗೆಟ್ ನೀಡುವ ಬಗ್ಗೆ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಸೂಚನೆ ನೀಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರಕಾರವು ಅಧಿಕಾರಕ್ಕೆ ಬಂದು ಎರಡು ತಿಂಗಳು ಪೂರೈಸಿದ ಬಳಿಕ ಗಂಭೀರವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿದೆ. ಅಲ್ಲದೆ ಜನರಿಗೆ ನೆರವಾಗಲಿದೆ ಎಂದು ಭಾವಿಸಿದ್ದೆ. ಅನೇಕ ಜಿಲ್ಲೆಗಳಲ್ಲಿ ವಿಪರೀತ ಮಳೆ ಬರುತ್ತಿದೆ. ಅನೇಕ ಜಿಲ್ಲೆಗಳಲ್ಲಿ ಮಳೆಯೇ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಸಭೆ ಮಾಡುತ್ತಿದ್ದಾರೆ. ಇಡೀ ಕರ್ನಾಟಕದ ಸಚಿವಸಂಪುಟ ಈ ಸಭೆಯಲ್ಲಿ ಭಾಗವಹಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟು ಪಡೆಯಬೇಕೆಂದು ಚರ್ಚಿಸಲು ನಡೆಯುತ್ತಿರುವ ಸಭೆ ಇದಲ್ಲ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಈಗಾಗಲೇ ಶಾಸಕರಿಗೆ ಫರ್ಮಾನು ಹೊರಡಿಸಿದ್ದು, ಅಭಿವೃದ್ಧಿಗೆ ಹಣ ಕೇಳಬೇಡಿ ಎಂದಿದೆ. 33 ಜನ ಶಾಸಕರು ಅಭಿವೃದ್ಧಿಗೆ ಹಣ ಕೋರಿ ಪತ್ರ ಬರೆದಿದ್ದಾರೆ. ಅವರೆಲ್ಲರಿಗೂ ಸಭೆ ನಿರಾಶೆ ತಂದಿಟ್ಟಿದೆ. ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ ಅವರು ಕರ್ನಾಟಕದ ಎಲ್ಲ ಸಚಿವರನ್ನು ಕರೆದು ಪ್ರತಿಯೊಬ್ಬ ಸಚಿವರಿಗೆ ಟಾರ್ಗೆಟ್ ಕೊಡುತ್ತಿದ್ದಾರೆ. ಸೂಟ್‍ಕೇಸ್‍ಗಳನ್ನು ತಂದು ಕೊಡಿ ಎಂಬ ಗುರಿ ನೀಡುವ ಸಭೆ ಇದಾಗಿದೆ. ಕರ್ನಾಟಕದ ರೈತರು, ಕಾರ್ಮಿಕರು, ಸಾಮಾನ್ಯ ಜನರು ಅತ್ಯಂತ ಹೆಚ್ಚು ಬೆಲೆ ಏರಿಕೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ ಎಂದರು.
ಅನೇಕ ಜಿಲ್ಲೆಗಳಲ್ಲಿ ಮಳೆ, ಪ್ರವಾಹದಿಂದ ಬಿತ್ತನೆ ಮಾಡಿಲ್ಲ. ಒಂದೆಡೆ ಹಸಿರು ಬರ, ಇನ್ನೊಂದೆಡೆ ಒಣ ಬರ ರಾಜ್ಯವನ್ನು ಕಾಡುತ್ತಿದೆ. ಇದರ ಜೊತೆಗೆ ಕಾಂಗ್ರೆಸ್ ಸರಕಾರದ ಬೆಲೆ ಏರಿಕೆ ಬರೆಯೂ ಜನರ ಮೇಲೆ ಬಿದ್ದಿದೆ ಎಂದು ವಿಶ್ಲೇಷಿಸಿದರು.
ಕರ್ನಾಟಕದಲ್ಲಿ ಹಾಲು, ಮೊಸರು, ಮಜ್ಜಿಗೆ, ತರಕಾರಿ, ವಿದ್ಯುತ್, ಕಟ್ಟಡ ಶುಲ್ಕ, ಮದ್ಯದ ದರ ಏರಿಸಿದ್ದಾರೆ. ಕೊಡುವುದು ಏನೂ ಇಲ್ಲ. ಗ್ಯಾರಂಟಿ ಹೆಸರಿನಲ್ಲಿ ಸಂಗ್ರಹ, ಸಂಗ್ರಹ ನಡೆದಿದೆ. ಸೂಟ್‍ಕೇಸ್ ತುಂಬಿಸಿಕೊಂಡು ದೆಹಲಿಗೆ ಕೊಡುವುದು, ಚುನಾವಣೆ ತಯಾರಿ ಮಾಡುವುದು ಕಾಂಗ್ರೆಸ್ ಸರಕಾರದ ಉದ್ದೇಶ ಎಂದು ಟೀಕಿಸಿದರು.
ಕರ್ನಾಟಕದ ಜನರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಸೂಟ್‍ಕೇಸ್ ತುಂಬಿಸುವ ಸರಕಾರಕ್ಕೆ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ನಾವು ದಲಿತರ ಪರ, ಹಿಂದುಳಿದ ವರ್ಗಗಳ ಪರ ಎಂದು ಬಹಿರಂಗವಾಗಿ ಹೇಳಿದ್ದರು. ಆದರೆ, 11 ಸಾವಿರ ಕೋಟಿ ರೂಪಾಯಿಯನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಗ್ಯಾರಂಟಿ ಸ್ಕೀಮಿಗೆ ಕೊಡುತ್ತಿದ್ದಾರೆ. ಎಲ್ಲಿದೆ ಇವರ ದಲಿತಪರ ಧೋರಣೆ ಎಂದು ಪ್ರಶ್ನಿಸಿದರು.