ಹೊಸದಿಗಂತ ವರದಿ ಹುಬ್ಬಳ್ಳಿ:
ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ನೈರುತ್ಯ ರೈಲ್ವೆ ವ್ಯಾಪ್ತಿಯ ಹುಬ್ಬಳ್ಳಿ ವಿಭಾಗದ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದ್ದು, ಆರು ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ.
ಅಂದಾಜು 113.22 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಕುರಿತು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರೈಲ್ವೆ ಹುಬ್ಬಳ್ಳಿ ವಿಭಾಗಿಯ ವ್ಯವಸ್ಥಾಪಕ ಹರ್ಷ ಖರೆ ಮಾತನಾಡಿ, ಭಾರತೀಯ ರೈಲ್ವೆಯು ಕರ್ನಾಟಕ ರೈಲ್ವೆ ಅಭಿವೃದ್ಧಿಗೆ ಬದ್ಧವಾಗಿದ್ದು, ಈ ವರ್ಷ ಕೇಂದ್ರ ಬಜೆಟ್‌ನಲ್ಲಿ 7561 ಕೋಟಿ ರೂ. ಅನುದಾನ ನೀಡಿದೆ. ಅದರಲ್ಲಿ ಹುಬ್ಬಳ್ಳಿ ವಿಭಾಗದ ನಿಲ್ದಾಣಗಳ ಅಭಿವೃದ್ಧಿಗೆ 257 ಕೋಟಿ ರೂ. ನೀಡಿದೆ. ಇನ್ನುಳಿದ 10 ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿ ಆದಷ್ಟು ಬೇಗ ಆರಂಭಿಸಲಾಗುವುದು ಎಂದು ತಿಳಿಸಿದರು.
ಮೊದಲನೇ ಹಂತದಲ್ಲಿ ಹುಬ್ಬಳ್ಳಿ ವಿಭಾಗದ ಆರು ನಿಲ್ದಾಣಗಳಾದ ಅಳ್ನಾವರ, ಘಟಪ್ರಭಾ, ಗೋಕಾಕ್ ರೋಡ್, ಗದಗ, ಕೊಪ್ಪಳ ಹಾಗೂ ಬಳ್ಳಾರಿ ಅಭಿವೃದ್ಧಿ ಪಡಿಸಲಾಗುವುದು. ನಿಲ್ದಾಣಗಳ ಕಟ್ಟಡಗಳ ಸುಧಾರಣೆ, ಎರಡು ಬದಿಯಲ್ಲಿ ಸಂಪರ್ಕ, ರೂಫ್ ಪ್ಲಾಜಾಗಳು ಸೇರಿದಂತೆ ಆಧುನಿಕ ಮೂಲಸೌಕರ್ಯಗಳ ಒದಗಿಸುವುದು ಎಂದರು.
ರೈಲ್ವೆ ಗತಿ ಶಕ್ತಿ ತಂಡ ಈ ನಿಲ್ದಾಣಗಳ ಅಭಿವೃದ್ಧಿ ಸಂಪೂರ್ಣ ಜವಾಬ್ದಾರಿ ಹೊಂದಿದ್ದು, ಗುಣಮಟ್ಟದ ಕಾಮಗಾರಿ ಮಾಡಲಿದೆ. ಪ್ರಯಾಣಿಕರ ಅನುಕೂಲ ಹಾಗೂ ಪ್ರವಾಸೋದ್ಯಮ ಉತ್ತೇಜಿಸುವ ಸಲುವಾಗಿ ಈ ಯೋಜನೆ ಪೂರಕವಾಗಿದೆ ಎಂದು ಹೇಳಿದರು.