ಹೊಸದಿಗಂತ ವರದಿ ಹುಬ್ಬಳ್ಳಿ:
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕುಬ್ಜ ಕ್ರೀಡಾಪಟು ದೇವಪ್ಪ ಮೋರೆ ಜರ್ಮನಿಯಲ್ಲಿ ನಡೆದಿರುವ ಎಂಟನೇ ಕುಬ್ಜ ವಿಶ್ವ ಕ್ರೀಡಾ ಕೂಟದ ಓಟ ಸ್ಪರ್ಧೆಯಲ್ಲಿ ಎರಡು ಬಂಗಾರ ಪದಕ ಪಡೆದು ಭಾರತಕ್ಕೆ ಕೀರ್ತಿ ತಂದಿದ್ದಾರೆ.
ಗುರುವಾರ ನಡೆದ ಕ್ರೀಡಾಕೂಟದಲ್ಲಿ 60 ಮೀಟರ್ ಓಟ್‌ವನ್ನು 10.8 ಸೆಕೆಂಡ್ ಹಾಗೂ 100 ಮೀಟರ್ ಕೇವಲ 18.6 ಸೆಕೆಂಡ್‌ನಲ್ಲಿ ಓಡಿ ಎರಡು ಸ್ಪರ್ಧೆಯಲ್ಲಿ ಬಂಗಾರ ಗೆದ್ದಿದ್ದಾರೆ. ವಿಶ್ವ ಕುಬ್ಜ ಕ್ರೀಡಾ ಸ್ಪರ್ಧೆಯಲ್ಲಿ ಸತತ ನಾಲ್ಕನೇ ಬಾರಿ ಭಾಗವಹಿಸಿದ್ದಾರೆ.
ಅಮೇರಿಕಾ, ಐರ್ಲ್ಯಾಡ್, ಕೆನಡಾ ಹಾಗೂ ಸದ್ಯ ಜರ್ಮನಿಯಲ್ಲಿ ಪಾಲ್ಗೊಂಡಿದ್ದಾರೆ. ಅದರಲ್ಲಿ ಮೂರು ಬಾರಿಯೂ ಬಂಗಾರ ಪದಕ ಪಡೆದು ಹ್ಯಾಟ್ರಿಕ್ ಹಿರೋ ಆಗಿದ್ದಾರೆ. ವೃತ್ತಿಯಲ್ಲಿ ಕೃಷಿಕರಾದ ದೇವಪ್ಪ ಅವರು, ಎಂಟನೇ ವಿಶ್ವ ಕ್ರೀಡಾ ಕೂಟದಲ್ಲಿ ಆಯ್ಕೆಯಾದಾಗ ಆರ್ಥಿಕ ಚೈತನ್ಯವಿಲ್ಲದೆ ಭಾಗವಹಿಸುವುರು ಅನುಮಾನವಾಗಿತ್ತು.
ಹೊಸದಿಗಂತ ಪತ್ರಿಕೆ ವಿಶೇಷ ವರದಿ ಪ್ರಕಟಿಸುವ ಮೂಲಕ ಇದರ ಮೇಲೆ ಬೆಳಕು ಚೆಲ್ಲಿತ್ತು. ಈ ಹಿನ್ನೆಲೆ ನಗರದ ಪ್ರಮುಖ ಸಂಘ, ಸಂಸ್ಥೆಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಆರ್ಥಿಕ ಸಹಾಯ ಮಾಡಿದ್ದರು. ದೇವಪ್ಪ ಅವರಿಗೆ ಸಾಧನೆ ಮಾಡಬೇಕು ಎಂಬ ಛಲವಿತ್ತು. ಆದರೆ ಆರ್ಥಿಕ ಸಮಸ್ಯೆ ಇದಕ್ಕೆ ಅಡೆತಡೆಯಾದ ಕಾರಣ ಕ್ರೀಡಾಕೂಟದಲ್ಲಿ ಭಾಗವಹಿಸಲು ಹಿಂದೆಟು ಹಾಕಿದ್ದರು. ಆಗ ಸಚಿವ ಸಂತೋಷ ಲಾಡ್ ಹಾಗೂ ಸಂಘ ಸಂಸ್ಥೆಗಳು ಆರ್ಥಿಕ ಸಹಾಯ ಮಾಡಿದ್ದರು. ದೇವಪ್ಪನಿಗೆ ಸಹಾಯ ಮಾಡಿ ಪ್ರೋತ್ಸಾಹಿಸಿದ ಎಲ್ಲರಿಗೂ ಕುಬ್ಜ ಕ್ರೀಡಾಕೂಟದ ಭಾರತೀಯ ತಂಡದ ಕೋಚ್ ಹಾಗೂ ವ್ಯವಸ್ಥಾಪಕ ಶಿವಾನಂದ ಗುಂಜಾಲ್ ಧನ್ಯವಾದ ತಿಳಿಸಿದ್ದಾರೆ.