ಹೊಸದಿಗಂತ ವರದಿ ಬಳ್ಳಾರಿ:
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಈ ಬಾರಿ ಮಹಿಳೆಯರಿಗೆ ನೀಡಬೇಕು ಎಂದು ಒತ್ತಾಯಿಸಿ ಯುವಸೇನಾ ಸೋಶಿಯಲ್ ಆ್ಯಕ್ಷನ್ ಕ್ಲಬ್ ಪದಾಧಿಕಾರಿಗಳು ಪರಿಶಿಷ್ಟ ಪಂಗಡ, ಕ್ರೀಡೆ, ಯುವಜನ ಸೇವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ 1988ರಲ್ಲಿ ಸ್ಥಾಪನೆಯಾಗಿದ್ದು, ಆರಂಭದಿಂದ ಇಲ್ಲಿವರೆಗೂ ಮಹಿಳೆಯರು ಯಾರೂ ಬೂಡಾ ಅಧ್ಯಕ್ಷರಾಗಿಲ್ಲ, ಕಾಂಗ್ರೆಸ್ ಅಷ್ಟೇ ಅಲ್ಲ, ಬಿಜೆಪಿ, ಜೆಡಿಎಸ್ ಯಾವ ಪಕ್ಷದವರೂ ಮಹಿಳಾ ಅಧ್ಯಕ್ಷರನ್ನು ಇಲ್ಲಿವರೆಗೂ ನೇಮಕ ಮಾಡಿಲ್ಲ. ಮಹಿಳೆಯರನ್ನು ಯಾಕೆ ಅಧ್ಯಕ್ಷರನ್ನಾಗಿ ಮಾಡುತ್ತಿಲ್ಲ, ಅವರಲ್ಲಿ ಎಲ್ಲ ಸಾಮರ್ಥ್ಯಗಳಿದ್ದರೂ ಅಧ್ಯಕ್ಷ ಸ್ಥಾನಕ್ಕೆ ತೆಗೆದುಕೊಳ್ಳುತ್ತಿಲ್ಲ.
ಮಹಿಳೆಯರನ್ನು ಕಡೆಗಣಿಸುವುದು ಸರಿಯಲ್ಲ, ಅವರಲ್ಲೂ ಶಕ್ತಿ, ಸಾಮರ್ಥ್ಯವುಳ್ಳವರಿದ್ದಾರೆ, ಬುದ್ದಿವಂತರಿದ್ದಾರೆ, ಶಿಕ್ಷಣವಂತರಿದ್ದಾರೆ, ಆದರೂ ಇಲ್ಲಿವರೆಗೆ ಯಾಕೆ ಮಹಿಳೆಯರನ್ನು ಅಧ್ಯಕ್ಷರನ್ನಾಗಿ ಮಾಡದೇ ಕೇವಲ ಪುರುಷರನ್ನೇ ಮಾಡಲಾಗುತ್ತಿದೆ ಎಂದು ಯುವಸೇನಾ ಸೋಶಿಯಲ್ ಆ್ಯಕ್ಷನ್ ಕ್ಲಬ್ ಅಧ್ಯಕ್ಷ ಮೇಕಲ ಈಶ್ವರ ರೆಡ್ಡಿ ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಆದ್ಯತೆ ನೀಡಿ ಅನೇಕ ಗ್ಯಾರಂಟಿಗಳನ್ನು ನೀಡಿ ರಾಜ್ಯದ ಮನೆ ಮಾತಾಗಿದೆ. ಎಲ್ಲ ಪಕ್ಷದಲ್ಲಿ ಪ್ರಾಮಾಣಿಕರು, ಬುದ್ದಿವಂತರು ಇರಲಿದ್ದಾರೆ, ಅಂತಹ ಮಹಿಳೆಯರನ್ನು ಗುರುತಿಸಿ ಬೂಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಮಹಿಳೆಯರು ಪುರುಷರಷ್ಟೇ ಸಮಾನ ಎನ್ನುವುದು ಸಭೆ ಸಮಾರಂಭಗಳಲ್ಲಿ ಹೇಳಿಕೆಗೆ ಸಿಮಿತರಾಗಬಾರದು, ಅದನ್ನು ಅನುಷ್ಟಾನಕ್ಕೆ ತರಬೇಕು ಎಂದರು. ಮಹಿಳೆಯರಿಗೆ ನಾನಾ ಗ್ಯಾರಂಟಿಗಳನ್ನು ನೀಡುವ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ನಮ್ಮ ಬೂಡಾ ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯರನ್ನೇ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.