ಹೊಸದಿಗಂತ ವರದಿ ಮಡಿಕೇರಿ:
ಮಡಿಕೇರಿಯಿಂದ ಮನೆ ಬಿಟ್ಟು ತೆರಳಿದ್ದ ಇಬ್ಬರು ಬಾಲಕಿಯರ ಪೈಕಿ ಒಬ್ಬಾಕೆ ಉಡುಪಿ ಸಮೀಪದ ಮಲ್ಪೆ ಸಮುದ್ರ ತೀರದಲ್ಲಿ ನೀರು ಪಾಲಾದ ಘಟನೆ ಶನಿವಾರ ನಡೆದಿದ್ದು, ಮತ್ತೊಬ್ಬಳನ್ನು ಮಲ್ಪೆಯ ಸಮಾಜಸೇವಕ, ಆಪತ್ಬಾಂಧವ ಈಶ್ವರ ಎಂಬವರು ರಕ್ಷಿಸಿದ್ದಾರೆ.
ಮಡಿಕೇರಿ ಸಮೀಪದ ಮೇಕೇರಿಯ ಎರಡು ಕುಟುಂಬಗಳ ಬಾಲಕಿಯರಾದ ಮಾನ್ಯ ಹಾಗೂ ಯಶಸ್ವಿನಿ ನಗರದ ಖಾಸಗಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಓದುತ್ತಿದ್ದು, ಮೂರು ದಿನಗಳ ಹಿಂದೆ ಕಾಲೇಜಿಗೆಂದು ಬಂದವರು ನಾಪತ್ತೆಯಾಗಿದ್ದರು. ಈ ಸಂಬಂಧ ಮಡಿಕೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಇಬ್ಬರು ಬಾಲಕಿಯರು ಶನಿವಾರ ಮಲ್ಪೆಯ ಸಮುದ್ರದ ಪಕ್ಕದಲ್ಲಿ ಬಂಡೆಯೊಂದರ ಮೇಲೆ ಕುಳಿತು ಆಟವಾಡುತ್ತಿದ್ದರು ಎನ್ನಲಾಗಿದ್ದು, ಸಮುದ್ರದಲ್ಲಿ ಬಂದ ದೊಡ್ಡ ಅಲೆಯೊಂದು ಬಂಡೆಯ ಮೇಲಿನಿಂದ ಇಬ್ಬರನ್ನೂ ಎಳೆದೊಯ್ದಿದೆ.
ಈ ಸಂದರ್ಭ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗೇಳುತ್ತಿರುವ ವಿಷಯ ತಿಳಿದು, ಸಮೀಪದಲ್ಲೇ ಇದ್ದ ಮಲ್ಪೆಯ ಸಮಾಜಸೇವಕ ಹಾಗೂ ಆಪತ್ಬಾಂಧವ ಎಂದೇ ಪರಿಚಿತರಾಗಿರುವ ಈಶ್ವರ ಅವರು ಸಮುದ್ರಕ್ಕೆ ನೆಗೆದು ಇಬ್ಬರನ್ನೂ ಮೇಲೆತ್ತಿದ್ದಾರೆ.
ಆದರೆ ಆ ವೇಳೆಗಾಗಲೇ ಮಾನ್ಯ ನೀರು ಕುಡಿದು ಸಾವಿಗೀಡಾಗಿದ್ದು, ಯಶಸ್ವಿನಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆ ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ.
ಶನಿವಾರ ಈ ಘಟನೆ ನಡೆದಿದ್ದು, ಆ ಸಮಯದಲ್ಲಿ ಸಮುದ್ರ ದಡದಲ್ಲಿ ಪ್ರವಾಸಿಗರ ಸಂಖ್ಯೆಯೂ ವಿರಳವಾಗಿತ್ತು ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಯಶಸ್ವಿನಿಯ ಹೇಳಿಕೆ ಪ್ರಕಾರ, ಮಡಿಕೇರಿಯಿಂದ ಮಂಗಳೂರಿಗೆ ಬಂದು ಅಲ್ಲಿಂದ ಮುಂದಿನ ದಾರಿ ಕಾಣದೆ ಮಲ್ಪೆ ತೀರಕ್ಕೆ ಬಂದಿದ್ದಾಗಿಯೂ ಅಲ್ಲಿ ಕುಳಿತಿದ್ದಾಗ ಕಡಲ ಅಲೆಗಳಿಗೆ ಸಿಲುಕಿರುವುದಾಗಿ ಹೇಳಲಾಗಿದೆ.
ಇಬ್ಬರು ಬಾಲಕಿಯರು ಯಾವ ಕಾರಣಕ್ಕಾಗಿ ಮನೆ ಬಿಟ್ಟು ಬಂದಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ಅಪ್ರಾಪ್ತ ಬಾಲಕಿಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಇರುವುದರಿಂದ ಅದರಲ್ಲಿ ಪ್ರಯಾಣಿಸಿ ಇಷ್ಟು ದೂರ ಬಂದಿದ್ದರೋ ಅಥವಾ ಯಾರಾದರೂ ಕರೆದೊಯ್ದಿದ್ದರೋ ಎಂಬ ಬಗ್ಗೆ ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಮಲ್ಪೆ ಸಬ್ ಇನ್ಸ್‌ಪೆಕ್ಟರ್ ಗುರುನಾಥ್ ಹಾದಿಮನಿ ತಿಳಿಸಿದ್ದಾರೆ.