ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ರಣತಂತ್ರ ರೂಪಿಸಲು ಈಗಾಗಲೇ ವಿರೋಧ ಪಕ್ಷಗಳ ಮೈತ್ರಿ ಕೂಟ ರಚಿಸಿದ್ದು, ಅದಕ್ಕೆ INDIA ಒಕ್ಕೂಟ ಎಂಬ ಹೆಸರು ಕೂಡ ಇಡಲಾಗಿತ್ತು.
ಇದೀಗ ಈ ಕೂಟಕ್ಕೆ ಸೋನಿಯಾ ಗಾಂಧಿ ಅವರು ಅಧ್ಯಕ್ಷೆಯಾಗುವ ಸಾಧ್ಯತೆ ಇದೆ. ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನು ಮೈತ್ರಿ ಕೂಟದ ಸಂಚಾಲಕರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ. ಅದೇ ರೀತಿ ವಿಪಕ್ಷ ಒಕ್ಕೂಟದ 11 ಸದಸ್ಯನ್ನು ಒಳಗೊಂಡ ಸಮನ್ವಯ ಸಮಿತಿಗೆ ನಿತೀಶ್ ಕುಮಾರ್ ಕನ್ವೀನರ್ ಆಗುವ ನಿರೀಕ್ಷೆ ಇದೆ.
ಇದರ ಭಾಗವಾಗಿ ಮೂರನೇ ಸಭೆ ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ಆಯೋಜನೆಗೊಂಡಿದೆ. ಈ ಸಭೆಯಲ್ಲಿ ಅಧ್ಯಕ್ಷರು ಹಾಗೂ ಸಂಚಾಲಕರ ಆಯ್ಕೆ ಕುರಿತಾಗಿ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.
ಸದ್ಯ ನಿತೀಶ್ ಕುಮಾರ್ ಅವರನ್ನು ಇಂಡಿಯಾ ಮೈತ್ರಿ ಕೂಟದ ಸಂಚಾಲಕರನ್ನಾಗಿ ನೇಮಿಸಲು ಕಾಂಗ್ರೆಸ್ ನಾಯಕರೂ ಕೂಡಾ ಸಮ್ಮತಿ ಸೂಚಿಸಿದ್ದಾರೆ ಎಂದು ಬಿಹಾರದ ಮಹಾ ಮೈತ್ರಿ ಕೂಟದ ಮೂಲಗಳು ತಿಳಿಸಿವೆ. ಆದರೆ, ಮುಂಬೈ ಸಭೆಯಲ್ಲೇ ಈ ಕುರಿತಾಗಿ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ .
ಈ ಹಿಂದೆ ಯುಪಿಎ ಮೈತ್ರಿ ಕೂಟದ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರನ್ನೇ ಇಂಡಿಯಾ ಮೈತ್ರಿ ಕೂಟದ ಅಧ್ಯಕ್ಷರನ್ನಾಗಿ ಮುಂದುವರೆಸಲು ಕಾಂಗ್ರೆಸ್ ನಾಯಕರು ಬಯಸಿದ್ದಾರೆ. ಒಂದು ವೇಳೆ ಸೋನಿಯಾ ಗಾಂಧಿ ಅವರು ಅಧ್ಯಕ್ಷೆಯಾಗಲು ಸಮ್ಮತಿ ಸೂಚಿಸದಿದ್ದರೆ, ಅವರು ಹೆಸರಿಸುವ ಯಾರಿಗಾದರೂ ಅಧ್ಯಕ್ಷ ಪಟ್ಟ ಸಿಗಬಹುದಾಗಿದೆ.