ಹೊಸದಿಗಂತ ವರದಿ, ಮಂಡ್ಯ:
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ಪೇ ಸಿಎಸ್ ಅಭಿಯಾನ ನಡೆಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಹಿಂದೆ ಕಾಂಗ್ರೆಸ್ ನಡೆಸಿದ್ದ ಪೇಸಿಎಂ ಅಭಿಯಾನದ ರೀತಿಯಲ್ಲೇ ಪೇಸಿಎಸ್ ಕ್ಯೂಆರ್ ಕೋಡ್ ರಚನೆ ಮಾಡಿ, ಅದಕ್ಕೆ ಚಲುವರಾಯಸ್ವಾಮಿ ಫೋಟೋ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಮಂಡ್ಯದ ಹಲವೆಡೆಯೂ ಪೇಸಿಎಸ್ ಪೋಸ್ಟರ್ ಅನ್ನು ಅಂಟಿಸಲಾಗಿದೆ. ಈ ನಡುವೆ ಪೋಸ್ಟರ್ ಅನ್ನು ಪೊಲೀಸರು ಕಿತ್ತು ಹಾಕಿದ್ದು, ಪ್ರತಿಭಟನೆ ನಡೆಸಿದ ಹಿನ್ನೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ಸಚಿವ ಚಲುವರಾಯಸ್ವಾಮಿ ಭಾವಚಿತ್ರ ಇದ್ದ ಫ್ಲೆಕ್ಸ್‌ಗೆ ‘ಪೇಸಿಎಸ್ ಅಭಿಯಾನದ ಪೋಸ್ಟರ್ ಅಂಟಿಸಿ ಸಚಿವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹೆದ್ದಾರಿಯ ಮಧ್ಯಭಾಗದ ಕಲ್ಲುಗಳಿಗೂ ಪೋಸ್ಟರ್ ಅಂಟಿಸಿದ ಬಿಜೆಪಿ ಪಕ್ಷದ ಐವರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಬಿಜೆಪಿ ಕಾರ್ಯಕರ್ತರಾದ ಸಿ.ಟಿ. ಮಂಜುನಾಥ್, ಶಿವಕುಮಾರ್ ಆರಾಧ್ಯ, ಪ್ರಸನ್ನ, ಶಿವಕುಮಾರ್, ವಿನೋಬಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೃಷಿ ಇಲಾಖೆಯ ಅಧಿಕಾರಿಗಳ ಹೆಸರಿನಲ್ಲಿ ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯಪಾಲರು ಪತ್ರವನ್ನು ಕಳುಹಿಸಿಕೊಟ್ಟಿದ್ದರು. ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ಪ್ರಕರಣ ಕುರಿತು ಸಿಐಡಿ ತನಿಖೆ ಚುರುಕುಗೊಂಡಿರುವ ಬೆನ್ನೆಲ್ಲೇ ಬಿಜೆಪಿಯು ಸಚಿವರ ವಿರುದ್ಧ ಪೇ-ಸಿಎಸ್ ಅಭಿಯಾನ ಆರಂಭಿಸಿದೆ.
ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಸರ್ಕಾರದ ವಿರುದ್ಧ ಶೇ.40 ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್ ಪೇ-ಸಿಎಂ ಅಭಿಯಾನ ಮಾಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ಧ ಇದೇ ಮಾದರಿಯ ಅಭಿಯಾನವನ್ನು ಬಿಜೆಪಿ ನಡೆಸುತ್ತಿದೆ.