ಹೊಸ ದಿಗಂತ ವರದಿ, ಅಂಕೋಲಾ:
ತಾಲೂಕಿನ ಹೊನ್ನೇಬೈಲ ಸಮುದ್ರ ತೀರದಲ್ಲಿ ಕೊಳೆತು ಒಣಗಿ ಬಿದ್ದ ವ್ಯಕ್ತಿಯೋರ್ವರ ಮೃತ ದೇಹವನ್ನು ಹೊತ್ತು ಸಾಗಿಸಲು ಸ್ವತಃ ಹೆಗಲು ನೀಡುವ ಮೂಲಕ ಅಂಕೋಲಾ ಪಿ.ಎಸ್. ಐ ಉದ್ದಪ್ಪ ಧರೆಪ್ಪನವರ್ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೊನ್ನೇಬೈಲ ಎತ್ತುಗಲ್ಲು ಪ್ರದೇಶದ ಅತ್ಯಂತ ದುರ್ಗಮ ಸ್ಥಳದಲ್ಲಿ ಮೃತ ದೇಹ ಕಂಡು ಬಂದ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೃತ ದೇಹ ಸಂಪೂರ್ಣ ಕೊಳೆತು ಒಣಗಿ ದುರ್ವಾಸನೆ ಬೀರುತ್ತಿರುವುದು ಗಮನಕ್ಕೆ ಬಂದಿತ್ತು.
ಸುಮಾರು 20 ದಿನಗಳ ಹಿಂದೆ ಮೃತ ಪಟ್ಟಿದ್ದಾನೆ ಎನ್ನಲಾದ ವ್ಯಕ್ತಿಯ ಮೃತ ದೇಹವನ್ನು ಕಡಲ ತೀರದ ಗುಡ್ಡದ ಮೇಲಿನ ಅತ್ಯಂತ ಕಿರಿದಾದ ದುರ್ಗಮ ರಸ್ತೆಯ ಮೂಲಕ ಸಾಗಿಸುವುದೇ ಸವಾಲಿನ ಕೆಲಸವಾಗಿತ್ತು.
ಇಂಥ ಸಂದರ್ಭದಲ್ಲಿ ಪಿ.ಎಸ್. ಐ ಉದ್ದಪ್ಪ ಸ್ವತಃ ತಾವೇ ಕಾರ್ಯೋನ್ಮುಖರಾಗಿ ಸಿಬ್ಬಂದಿಗಳಿಲ್ಲಿ ಹುರುಪು ತುಂಬಿದರಲ್ಲದೇ ಮೃತ ದೇಹವನ್ನು ಪ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಿ ಸಾಗಿಸಲು ಅನುಕೂಲ ಆಗುವಂತೆ ಬಿದಿರು ಕಂಬಕ್ಕೆ ಮೃತ ದೇಹ ಕಟ್ಟಿ ತಾವೇ ಹೆಗಲ ಮೇಲೆ ಹೊತ್ತು ಕಡಿದಾದ ದಾರಿಯಲ್ಲಿ ಮುನ್ನಡೆದರು.
ಸ್ವಲ್ಪ ಆಯ ತಪ್ಪಿದರೂ ಕೆಳಗೆ ಬೀಳುವಂತ ಸ್ಥಳದಲ್ಲಿ ಮಾರ್ಗದರ್ಶನ ನೀಡುತ್ತ ಮೃತ ದೇಹ ಹೊತ್ತು ಸಾಗಿದ ಪಿ.ಎಸ್. ಐ ಉದ್ದಪ್ಪ ಬಹುದೂರ ನಿಂತ ವಾಹನದ ವರೆಗೆ ಮೃತ ದೇಹ ಸಾಗಿಸಿದರು.
ಪೊಲೀಸ್ ಸಿಬ್ಬಂದಿ ಸತೀಶ ಅಂಬಿಗ, ಜಗದೀಶ ನಾಯ್ಕ, ನಂದನ ಶೆಟ್ಟಿ, ಹೊನ್ನೇಬೈಲ ಗ್ರಾಮ ಪಂಚಾಯತ್ ಸದಸ್ಯ ಮಾದೇವ ಗುನಗಾ, ಸ್ಥಳೀಯ ಪ್ರಮುಖ ಬೊಮ್ಮಾ ಗೌಡ, ಲೋಹಿತ ಗೌಡ, ಅರಣ್ಯ ಇಲಾಖೆ ಸಿಬ್ಬಂದಿ ಲೋಹಿತ ಗೌಡ ಸಹಕರಿಸಿದರು.
ಸಮುದ್ರ ತೀರದ ಗುಡ್ಡದ ಮೇಲಿಂದ ಸುಮಾರು ಮೂರು ಕಿಲೋ ಮೀಟರ್ ದೂರ ಮೃತ ದೇಹ ಹೊತ್ತು ಸಾಗಿದ ಪಿ.ಎಸ್. ಐ ಉದ್ದಪ್ಪ ಧರೆಪ್ಪನವರ್ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ.