ಹೊಸದಿಗಂತ ವರದಿ ಹುಬ್ಬಳ್ಳಿ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅತೀ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಸುಭದ್ರವಾಗಿದ್ದು, ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಹೇಳಿದರು.
ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಸರ್ಕಾರ ಆರು ತಿಂಗಳಲ್ಲಿ ಬೀಳಲಿದೆ ಎಂಬ ಬಸವನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಗೆ ಪ್ರತಿಕ್ರಿಸಿದ ಜಗದೀಶ್ ಶೆಟ್ಟರ್, ಕಾಂಗ್ರೆಸ್ ನವರು ಕಮಿಷನ್ ಬಗ್ಗೆ ಬಿಜೆಪಿ ಅವರ ಮೇಲೆ ಆರೋಪ ಮಾಡಿದಾಗ ಒಬ್ಬರು ಉತ್ತರ ನೀಡಲಿಲ್ಲ. ರಾಜ್ಯ ಜನರು ಸಹ ಭ್ರಷ್ಟಾಚಾರದ ಬಗ್ಗೆ ದನಿ ಎತ್ತಿದ್ದರು. ಬಿಜೆಪಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹರಿಹಾಯ್ದರು.
ಅಡುಗೆ ಇದ್ದಲ್ಲಿ ಶೆಟ್ಟರ್ ಹೋಗುತ್ತಾರೆ ಎಂಬ ಶಾಸಕ ಆರ್.ಅಶೋಕ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ಅವರು ನಾನು ಸೋತರು ಸಹ ನನ್ನ ಬಗ್ಗೆ ಮಾತನಾಡುವುದು ಬಿಟ್ಟಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಕಾಂಗ್ರೆಸ್ ಅತೀ ಹೆಚ್ಚು ಸ್ಥಾನ ಗೆಲ್ಲಲು ಕಾರಣ ಆಗಿದ್ದರಿಂದ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಬಹುಶಃ ಅಶೋಕ ಅವರಿಗೆ ಚುನಾವಣಾ ಮುಂಚೆ ಸೋಲುವುದು ತಿಳಿದಿರಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಕಮಿಷನ್ ಬಗ್ಗೆ ಮಾತನಾಡುವ ಸಿ.ಟಿ. ರವಿ ಅವರು ಸತ್ಯ ಹರಿಶ್ಚಂದ್ರರಾ ಎಂದು ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.