ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಜೈಲಿಗೆ ಹೋಗುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಮತ್ತೆ ಕಾಂಗ್ರೆಸ್‍ಗೆ (Congress) ಹೋಗಲ್ಲ ಎಂದು ಶಾಸಕ ಮುನಿರತ್ನ (Munirathna) ಹೇಳಿದ್ದಾರೆ.
ಬೆಂಗಳೂರಿನ ವೈಯಾಲಿಕಾವಲ್‍ನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಆಪರೇಷನ್ ಹಸ್ತದ (Operation Congress) ಬಗ್ಗೆ ಮಾತನಾಡಿದ ಅವರು, ಐದು ವರ್ಷ ಜೈಲಿನಲ್ಲೇ ಇರಲು ಸಿದ್ದ. ನನ್ನ ಕ್ಷೇತ್ರದ ಅಭಿವೃದ್ಧಿ ಮಾಡಿಕೊಟ್ಟರೆ ಸಾಕು. ಬೇಕಿದ್ದರೆ ರಾಜೀನಾಮೆ ಕೊಡು, ಕ್ಷೇತ್ರದ ಅಭಿವೃದ್ಧಿ ಮಾಡಿಕೊಡ್ತೇವೆ ಎಂದರೆ ರಾಜೀನಾಮೆ ಕೊಡುತ್ತೇನೆ. ಆದರೆ ಕಾಂಗ್ರೆಸ್‍ಗೆ ಮಾತ್ರ ಸೇರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಯಾರು ಕಾಂಗ್ರೆಸ್ (Congress) ಗೆ ಹೋಗ್ತಾರೆ ಅಂತ ನನಗೆ ಗೊತ್ತಿಲ್ಲ. ನಾನಂತೂ ಬಿಜೆಪಿ (BJP) ಬಿಟ್ಟು ಹೋಗಲ್ಲ. ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆಯೇ ಹೊರತು ಕಾಂಗ್ರೆಸ್‍ಗೆ ಹೋಗಲ್ಲ. ನನಗೆ ಕಾಂಗ್ರೆಸ್ ಅಗತ್ಯ ಇಲ್ಲ, ನಾನು ಅಲ್ಲಿಗೆ ಹೋಗಲ್ಲ ಎಂದರು.
ಡಿಕೆಶಿ ಮುನಿರತ್ನ ಭೇಟಿ ಮಾಡಿದ್ರು ಎಂಬ(DK Shivakumar) ಹೇಳಿಕೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಮನೆಗೆ ಯಾರು ಹೋಗಿದ್ರು?, ಕಳ್ಳತನದಿಂದ ಯಾರಾದ್ರೂ ಹೋಗಿದ್ರಾ?, ಬುರ್ಕಾ ಹಾಕಿಕೊಂಡು ಹೋಗಿದ್ರಾ? ಇದನ್ನ ಹೇಳಲಿ. ಕ್ಷೇತ್ರದ ವಿಚಾರ ಬಗ್ಗೆ ಮಾತಾಡಿದ್ದನ್ನು ರಾಜಕೀಯವಾಗಿ ಡಿಕೆಶಿ ಬಳಸಿಕೊಳ್ಳೋದು ಬೇಡ ಎಂದು ತಿಳಿಸಿದರು.
ನನಗೆ ವೈಯಕ್ತಿಕವಾಗಿ ಡಿ.ಕೆ. ಸುರೇಶ್, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ (Siddaramaiah) ಜೊತೆ ಯಾವುದೇ ದ್ವೇಷ ಇಲ್ಲ. ಅಧಿಕಾರಕ್ಕೋಸ್ಕರ ನಾನು ಪಕ್ಷ ಬಿಟ್ಟು ಹೋಗಲ್ಲ. ನಾನು ವಿಪಕ್ಷದಲ್ಲಿಯೇ ಇರುತ್ತೇನೆ. ಬಿಜೆಪಿಯಲ್ಲಿ ಬಹಳ ಗೌರವಯುತವಾಗಿ ನೋಡಿಕೊಳ್ಳುತ್ತಿದ್ದಾರೆ. ನಳೀನ್ ಕುಮಾರ್ ಕಟೀಲ್ ಗೌರವದಿಂದ ಮಾತಾಡಿಸುತ್ತಾರೆ. ಎಂದೂ ಏಕವಚನದಿಂದ ಮಾತಾಡಿಸಿಲ್ಲ ಎಂದು ಹೇಳಿದರು.
6 ತಿಂಗಳಲ್ಲಿ ಸರ್ಕಾರ ಮುಗಿಯುತ್ತದೆ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಎಷ್ಟು ದಿನವೋ ಗೊತ್ತಿಲ್ಲ, ನಾನು ಜ್ಯೋತಿಷಿ ಅಲ್ಲ. ಬಿಜೆಪಿ ಶಾಸಕರಿಗೆ ಅನುದಾನ ಕೊಟ್ಟಿಲ್ಲ ಅಂದರೂ ಚಿಂತೆ ಇಲ್ಲ. ಅವರ ಶಾಸಕರಿಗಾದರೂ ಕೊಡಲಿ. ಕೆಲಸ ಮಾಡದ ಗುತ್ತಿಗೆದಾರ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆಗಿದ್ದರೆ ಅವರ ಸಮಸ್ಯೆ ಹೇಗೆ ಅರ್ಥ ಆಗುತ್ತದೆ. ಪ್ರಚಾರಕ್ಕಾಗಿಯೋ ಇನ್ನೊಂದಕ್ಕೋ ಅಧ್ಯಕ್ಷರಾದರೆ ಸಮಸ್ಯೆ ಕೇಳುವವರು ಯಾರು?. ಕೆಲಸ ಮಾಡುವ ಗುತ್ತಿಗೆದಾರ ಅಧ್ಯಕ್ಷ ಆಗಿರುತ್ತಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ ಎಂದರು.