ಹೊಸದಿಗಂತ ವರದಿ ಮಡಿಕೇರಿ:
ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ಕೊಡಗು ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ ಅವರ ಮನೆಗೆ ದಾಳಿ ನಡೆಸಿದ್ದಾರೆ.
ಮುಂಜಾನೆ ನಾಲ್ಕು ಗಂಟೆಗೇ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳ ತಂಡ, ನಗರದ ಸುದರ್ಶನ ವೃತ್ತದ ಬಳಿ ಇರುವ ಅಪರ ಜಿಲ್ಲಾಧಿಕಾರಿ ಅವರ ಸರಕಾರಿ ವಸತಿಗೃಹಕ್ಕೆ ದಾಳಿ ನಡೆಸಿತು.
ಇದೇ ಸಂದರ್ಭ ನಂಜುಂಡೇಗೌಡ ಅವರ ಪಿರಿಯಾಪಟ್ಟಣದಲ್ಲಿರುವ ಮಾವನ ಮನೆ ಹಾಗೂ ಮೈಸೂರಿನಲ್ಲಿರುವ ಸಂಬಂಧಿಕರ ಮನೆಯ ಮೇಲೂ ದಾಳಿ ನಡೆದಿದ್ದು, ಮಡಿಕೇರಿಯ ನಿವಾಸದಲ್ಲಿ ನಗದು ಪತ್ತೆಯಾಗಿರುವುದಾಗಿ ಹೇಳಲಾಗಿದೆ.
ಲೋಕಾಯುಕ್ತ ಎಸ್.ಪಿ. ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಡಿ ವೈ ಎಸ್ ಪಿ. ಪವನ್ ಕುಮಾರ್, ಇನ್ಸ್ಪೆಕ್ಟರ್ ಲೋಕೇಶ್ ಮತ್ತು ಸಿಬ್ಬಂದಿಗಳು ಪರಿಶೀಲನೆ ಕೈಗೊಂಡಿದ್ದಾರೆ. ನಂಜುಂಡೇಗೌಡ ಅವರ ಮಡಿಕೇರಿಯ ನಿವಾಸದಲ್ಲಿ ನಗದು ಪತ್ತೆಯಾಗಿರುವುದಾಗಿ ಹೇಳಲಾಗಿದ್ದು, ಹೆಚ್ಚಿನ ಶೋಧ ಮುಂದುವರಿದಿದೆ.
ನಂಜುಂಡೇಗೌಡ ಅವರು ಈ ಹಿಂದೆ ಮಡಿಕೇರಿ ಉಪ ವಿಭಾಗಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು.