ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆವ್ವ ಭೂತ ಬಿಡಿಸೋ ಸೀನ್‌ಗಳು ಸಿನಿಮಾಗಷ್ಟೇ ಸೀಮಿತ, ನಿಜ ಜೀವನದಲ್ಲಿ ಯಾರು ಇವನ್ನೆಲ್ಲಾ ನಂಬ್ತಾರೆ ಅಂತೀರಾ? ಹಾಗಿದ್ರೆ ಈ ಸುದ್ದಿ ಓದಲೇಬೇಕು..
ಉತ್ತರಪ್ರದೇಶದ ಮಹೋಬಾ ನಗರದಲ್ಲಿ ಮಂತ್ರವಾದಿಯ ಮಾತು ಕೇಳಿ 20 ವರ್ಷದ ಗರ್ಭಿಣಿ ಪೂಜಾ ಮೃತಪಟ್ಟಿದ್ದಾರೆ. ಪತಿಯ ಜತೆ ಮುಂಬೈನಲ್ಲಿ ಪೂಜಾ ಕೂಲಿ ಕೆಲಸ ಮಾಡಿಕೊಂಡು ಇದ್ದರು. ಗರ್ಭಿಣಿಯಾದ ನಂತರ ಪೂಜಾ ಆರೋಗ್ಯ ಹದಗೆಟ್ಟಿತ್ತು. ಹಾಗಾಗಿ ಮುಂಬೈ ಬಿಟ್ಟು ಮಹೋಬಕ್ಕೆ ಬರಲಾಗಿತ್ತು.
ಪೂಜಾ ಆರೋಗ್ಯ ಪ್ರತಿದಿನವೂ ಕ್ಷೀಣಿಸುತ್ತಿತ್ತು. ಜೋರಾಗಿ ಕೂಗಾಡುತ್ತಿದ್ದರು, ಊರಿನವರೆಲ್ಲಾ ಗಾಳಿ ಮೆಟ್ಟಿಕೊಂಡಿದೆ, ಮಾಂತ್ರಿಕನ ಬಳಿಗೆ ಹೋದರೆ ಜೀವ ಉಳಿಯುತ್ತದೆ ಎಂದು ಹೇಳಿದ್ದಾರೆ. ದೆವ್ವ ಭೂತಗಳ ಬಗ್ಗೆ ಭಯವಿದ್ದ ಕುಟುಂಬದವರು ಮಾಂತ್ರಿಕನ ಬಳಿ ಪೂಜಾಳನ್ನು ಕರೆದುಕೊಂಡು ಹೋಗಿದ್ದಾರೆ.
ಮಾಂತ್ರಿಕ ಮಹಿಳೆಗೆ ಚಿಕಿತ್ಸೆ ರೂಪದಲ್ಲಿ ಯಾವ್ಯಾವುದೋ ಔಷಧ ನೀಡಿದ್ದಾನೆ. ಜೊತೆಗೆ ಹೊಟ್ಟೆಯನ್ನು ಜೋರಾಗಿ ಒತ್ತಿದ್ದು, ಪೂಜಾ ಹೊಟ್ಟೆ ನೋವಿನಿಂದ ನರಳಿ ಪ್ರಜ್ಞೆ ತಪ್ಪಿದ್ದಾಳೆ.
ತಕ್ಷಣವೇ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದು, ವೈದ್ಯರು ತಾಯಿ ಮಗು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ.