ಹೊಸದಿಗಂತ ವರದಿ, ಮಡಿಕೇರಿ:
ಕೊಡಗಿನ ನಾಪೋಕ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯದವರಾದ ರವೀಶ್ ಕುಮಾರ್(26), ಮಹಮ್ಮದ್ ನಾಸೀರ್( 27) ಜೀಪ್ಪು ಮುರುಳಿ (23) ಎಂಬವರನ್ನು ಬಂಧಿಸಿ 24.61 ಗ್ರಾಂ. ಎಂಡಿಎಂಎ ಮತ್ತು 3.45 ಗ್ರಾಂ. ಕೊಕೈನ್ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಸರಬರಾಜು/ಮಾರಾಟದ ಬಗ್ಗೆ ಸಾರ್ವಜನಿಕರಿಂದ ಬರುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಮತ್ತು ಮಾದಕ ವಸ್ತುಗಳ ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಡಿಕೇರಿ ಉಪ ವಿಭಾಗಸ ಡಿವೈಎಸ್ಪಿ ಎಂ.ಜಗದೀಶ್, ಮಡಿಕೇರಿ ಗ್ರಾಮಾಂತರ ವೃತ್ತದ ಸಿಪಿಐ ಅನೂಪ್ ಮಾದಪ್ಪ, ನಾಪೋಕ್ಲು ಠಾಣಾಧಿಕಾರಿ ಈ.ಮಂಜುನಾಥ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ತನಿಖೆ ನಡೆಸಿ ಮಾಹಿತಿ ಸಂಗ್ರಹಿಸಿತ್ತು. ಬಲಮುರಿ- ಮೂರ್ನಾಡು ರಸ್ತೆ ಬಳಿ ಗುರುವಾರ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ತಂಡ ಆರೋಪಿಗಳನ್ನು ಮಾಲು ಸಹಿತ ವಶಕ್ಕೆ ಪಡೆದಿದೆ.
ತಂಡದ ಈ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘಿಸಿದ್ದಾರೆ.