ಆಲೆಮನೆಗೆ ಬೆಂಕಿ: ಮೂಕಜೀವಿಗಳು ಸಜೀವ ದಹನ, 10ಲಕ್ಷ ರೂ. ಮೌಲ್ಯದ ಆಸ್ತಿ ಬೆಂಕಿಗಾಹುತಿ

ಹೊಸದಿಗಂತ ವರದಿ ಮಂಡ್ಯ: 

ಆಕಸ್ಮಿಕ ಬೆಂಕಿಯಿಂದಾಗಿ ಆಲೆಮನೆಯೊಂದು ಹೊತ್ತಿ ಉರಿದು ಮೂಕಜೀವಿಗಳೂ ಸೇರಿದಂತೆ ಲಕ್ಷಾಂತರ ಮೌಲ್ಯದ ಆಸ್ತಿ-ಪಾಸ್ತಿ ಬೆಂಕಿಗಾಹುತಿಯಾಗಿರುವ ಘಟನೆ ಪಾಂಡವಪುರ ತಾಲೂಕಿನ ದೇವೇಗೌಡನಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಧನಂಜಯ (ಬಾಲು) ಹಾಗೂ ಉಮೇಶ್ ಎಂಬುವರಿಗೆ ಸೇರಿದ ಆಲಮನೆಗೆ ಬೆಂಕಿ ಬಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ವೌಲ್ಯದ ವಸ್ತುಗಳು ಸುಟ್ಟುಕರಕಲಾಗಿವೆ.

ದೇವೇಗೌಡನಕೊಪ್ಪಲು ಹೊರವಲಯದಲ್ಲಿರುವ ಆಲೆಮನೆಗೆ ಸೋಮವಾರ ಬೆಳಗಿನ ಜಾವ ಸುಮಾರು 3.30ರ ಸಮಯದಲ್ಲಿ ಬೆಂಕಿ ಆವರಿಸಿ ಒಂದು ನಾಟಿ ಹಸು, ಎರಡು ನಾಟಿ ಕರುಗಳು ಹಾಗೂ ಮೇಕೆಯೊಂದು ಸಾವನ್ನಪ್ಪಿವೆ. ಆಲೆಮನೆ ಬಳಿ ನಿಲ್ಲಿಸಿದ ಟ್ರಾಕ್ಟರ್ ಬೆಂಕಿಗಾಹುತಿಯಾಗಿದೆ. ಮನೆ ಕಟ್ಟುವ ಸಲುವಾಗಿ ಆಲೆಮನೆಯೊಳಗೆ ಜೋಡಿಸಿಟ್ಟಿದ್ದ 3ಲಕ್ಷ ರೂ.ಬೆಲೆ ಬಾಳುವ ತೇಗದ ಮರಗಳು ಕೂಡ ಸುಟ್ಟು ಬೂದಿಯಾಗಿದೆ.

ಮೊದಲಿಗೆ ಕಬ್ಬಿನ ರಚ್ಚಿಗೆ ಬೆಂಕಿ ಬಿದ್ದಿದೆ. ನಂತರ ಬೆಂಕಿ ಆಲೆಮನೆಯಾದ್ಯಂತ ವ್ಯಾಪಿಸಿ ಧಗ ಧಗನೆ ಹೊತ್ತಿ ಉರಿದಿದೆ. ತಕ್ಷಣವೇ ಕಾರ್ಮಿಕರು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು. ಅಲ್ಲದೇ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಅಷ್ಟರಲ್ಲಿ ಬೆಂಕಿ ಆಲೆಮನೆಗೆ ವ್ಯಾಪಿಸಿದ್ದರಿಂದ 10ಲಕ್ಷ ರೂ. ನಷ್ಟವಾಗಿದೆ.

ಶಾಸಕರ ಭೇಟಿ, ಪರಿಶೀಲನೆ :
ಘಟನಾ ಸ್ಥಳಕ್ಕೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯಲ್ಲಿ ಮೂಕಪ್ರಾಣಿಗಳು ಸಾವನ್ನಪ್ಪಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದರಲ್ಲದೇ, ಜಿಲ್ಲಾಧಿಕಾರಿಗಳು ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಆಲೆಮನೆಯ ಮಾಲೀಕರಿಗೆ ಭರವಸೆ ನೀಡಿದರು.

ಅಧಿಕಾರಿಗಳ ಭೇಟಿ :
ಘಟನಾ ಸ್ಥಳಕ್ಕೆ ತಹಸೀಲ್ದಾರ್ ಎಸ್.ಸಂತೋಷ್, ಪೊಲೀಸ್ ಇನ್ಸ್‌ಪೆಕ್ಟರ್ ಎಚ್.ಆರ್.ತ್ಯಾಗರಾಜು, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಹಿಮಾಚಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂಬಂಧ ಪಾಂಡವಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!