ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿ ಜಿಲ್ಲೆಯ ಹುಸೇನ್ ನಗರದಲ್ಲಿ ಯುವ ಗೃಹಿಣಿಯೊಬ್ಬರು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜೀವನದ ನೋವುಗಳನ್ನು ವಿಡಿಯೋದಲ್ಲಿ ಹೇಳಿಕೊಳ್ಳುತ್ತಲೇ ಪ್ರಾಣ ಕಳೆದುಕೊಂಡ ಈ ಲೈವ್ ಆತ್ಮಹತ್ಯೆ ಪ್ರಕರಣ ಇಡೀ ನಗರವನ್ನು ಬೆಚ್ಚಿಬೀಳಿಸಿದೆ.
ಬಳ್ಳಾರಿಯ ಹುಸೇನ್ ನಗರ ನಿವಾಸಿ ಮುನ್ನಿ (23) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೃತ ಮುನ್ನಿ ಅವರಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ, ಕೌಟುಂಬಿಕ ಕಾರಣಗಳಿಂದಾಗಿ ಕಳೆದ ಆರು ತಿಂಗಳಿನಿಂದ ಪತಿಯಿಂದ ದೂರವಿದ್ದ ಮುನ್ನಿ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಈ ಅವಧಿಯಲ್ಲಿ ಅವರಿಗೆ ಮೊಹಮ್ಮದ್ ಶೇಕ್ಷಾವಲ್ಲಿ ಎಂಬ ಯುವಕನ ಪರಿಚಯವಾಗಿ ಸ್ನೇಹ ಬೆಳೆದಿತ್ತು.
ಆತ್ಮಹತ್ಯೆಗೂ ಮುನ್ನ ಮುನ್ನಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ. ಅದರಲ್ಲಿ ತನಗಾದ ನೋವು ಮತ್ತು ಸಂಕಟಗಳನ್ನು ವಿವರಿಸುತ್ತಲೇ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೋಡುವವರ ಕಣ್ಣಾಲಿಗಳು ಒದ್ದೆಯಾಗುವಂತಿವೆ. ಕಳೆದ ಆರು ತಿಂಗಳಿಂದ ಪತಿಯಿಂದ ದೂರವಿದ್ದ ಸಂಕಟದ ನಡುವೆಯೇ, ಈ ಹೊಸ ಸ್ನೇಹದಲ್ಲೂ ವೈಮನಸ್ಸು ಉಂಟಾಗಿದ್ದು ಸಾವಿಗೆ ಪ್ರೇರಣೆಯಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಗಂಡ ಇಷ್ಟ ಇಲ್ಲ, ಬಾಯ್‌ಫ್ರೆಂಡ್ ಸೇರಿಸ್ತಿಲ್ಲ: ಲೈವ್‌ನಲ್ಲೇ ಸೂಸೈಡ್ ಮಾಡ್ಕೊಂಡ ಮಹಿಳೆ

