ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು (ಗುರುವಾರ) ನಡೆದ 20ನೇ ಆಸಿಯಾನ್-ಭಾರತ ಮತ್ತು 18ನೇ ಪೂರ್ವ ಏಷ್ಯಾ ಶೃಂಗಸಭೆಗಳಲ್ಲಿ ಬಾಗಿಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಭಾರತದತ್ತ ಪ್ರಯಾಣ ಬೆಳೆಸಿದರು. ಆಸಿಯಾನ್-ಭಾರತದ ಸಂಬಂಧ ʻಆಕ್ಟ್ ಈಸ್ಟ್ ನೀತಿʼಯ ಕೇಂದ್ರ ಸ್ತಂಭ ಎಂದು ಪ್ರಧಾನಿ ಬಣ್ಣಿಸಿದರು.
“ಇತಿಹಾಸ ಮತ್ತು ಭೌಗೋಳಿಕತೆಯು ಭಾರತ ಮತ್ತು ಆಸಿಯಾನ್ ಅನ್ನು ಒಂದುಗೂಡಿಸುತ್ತದೆ. ಮೌಲ್ಯಗಳು, ಪ್ರಾದೇಶಿಕ ಏಕೀಕರಣ, ಶಾಂತಿ ಮತ್ತು ಸಮೃದ್ಧಿ ನಮ್ಮನ್ನು ಒಂದುಗೂಡಿಸುತ್ತದೆ” ಎಂದರು. ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಭಾರತ-ಆಸಿಯಾನ್ ಪಾಲುದಾರಿಕೆಯು ನಾಲ್ಕನೇ ದಶಕವನ್ನು ತಲುಪಿದ್ದು, ಶೃಂಗಸಭೆಯ ಸಹ-ಅಧ್ಯಕ್ಷರಾಗಿರುವುದಕ್ಕೆ ನನಗೆ ಗೌರವವಿದೆ. ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಇಂಡೋನೇಷಿಯಾದ ಅಧ್ಯಕ್ಷ ಜೋಕೊ ವಿಡೋಡೊ ಅವರನ್ನು ಅಭಿನಂದಿಸಿದರು.
ಪ್ರಧಾನಿ ಇಂದು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಕೂಡ ಭಾಗವಹಿಸಿದ್ದರು. ಇಂದು ಮುಂಜಾನೆ ದೇಶಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರಿಗೆ ಜಕಾರ್ತಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಧ್ಯುಕ್ತ ಸ್ವಾಗತವನ್ನು ನೀಡಲಾಯಿತು. ತಮ್ಮನ್ನು ಸ್ವಾಗತಿಸಿದ ಭಾರತೀಯ ವಲಸಿಗರೊಂದಿಗೆ ಪ್ರಧಾನಿ ಕೆಲಕಾಲ ಸಂವಾದ ನಡೆಸಿದರು.