ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಕಾ: ಹೆಚ್‌ಡಿ ದೇವೇಗೌಡ ಅಧಿಕೃತ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕುರಿತು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ (HD Deve Gowda) ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತನಾಡಿರುವುದು ನಿಜ. ಮೋದಿ, ಅಮಿತ್ ಶಾ ನನಗೆ ಗೌರವ ಕೊಡುತ್ತಾರೆ. ಅವರಿಗೆ ನನ್ನ ನಡವಳಿಕೆ ಗೊತ್ತಿದೆ. ನನಗೆ ಇಷ್ಟು ಸೀಟು ಕೊಡಿ ಅಂತ ಕೇಳಿಲ್ಲ. ಪ್ರತಿ ಕ್ಷೇತ್ರದ ಬಗ್ಗೆ ವಿವರಿಸಿದ್ದೇನೆ. ಸೀಟು ಬಗ್ಗೆ ಕುಮಾರಸ್ವಾಮಿ ಕೂತು ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ.

ಈ ಚುನಾವಣೆಯಲ್ಲಿ ಜೆಡಿಎಸ್ ಉಳಿಯುತ್ತದೆ, ಬೆಳೆಯುತ್ತದೆ. ಕುಮಾರಸ್ವಾಮಿ ನಾಯಕತ್ವದಲ್ಲಿ ಮತ್ತೆ ಪಕ್ಷ ಬೆಳೆಯುತ್ತದೆ. ನೀವು ಕಾರ್ಯಕರ್ತರು ನಮ್ಮ ಪಕ್ಷದ ಶಕ್ತಿ. ನೀವು ಪಕ್ಷ ಉಳಿಸಬೇಕು ಎಂದು ಅವರು ಭಾವುಕರಾಗಿ ಮಾತನಾಡಿದರು.

ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದೆ. ನಾನು ಮತ್ತೆ ಪ್ರಧಾನಿ ಆಗೋಕೆ ಅಲ್ಲ. ಪಕ್ಷ ಉಳಿಸೋಕೆ ಭೇಟಿ ಆಗಿದ್ದೆ. ಆದರೆ ನಾನು ದೆಹಲಿಯಲ್ಲಿ ಅನೈತಿಕವಾಗಿ ಸಂಪರ್ಕ ಮಾಡಿದೆ ಎಂದು ಹೇಳುತ್ತಿದ್ದಾರೆ. ಈ ರಾಜ್ಯದಲ್ಲಿ ಯಾರಿಗೆ ನೈತಿಕತೆ ಇದೆ? ಯಾರಿಗೆ ಇಲ್ಲ ಅಂತ ವಿಶ್ಲೇಷಣೆ ಮಾಡಬಲ್ಲೆ. ಆದರೆ ನಾನು ವ್ಯಕ್ತಿಗತ ಟೀಕೆ ಮಾಡಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ದೇವೇಗೌಡ ಕಿಡಿಕಾರಿದರು.

ಕೆಲವರು ಕಾಂಗ್ರೆಸ್‌ಗೆ ಹೋಗುತ್ತೇನೆ ಎನ್ನುತ್ತಾರೆ. ಆದರೆ ದುಡುಕಬೇಡಿ ಎಂದು ಹೇಳಿದ್ದೇನೆ. ಬಿಜೆಪಿ ಅವರು ಎಷ್ಟು ಕ್ಷೇತ್ರ ಕೊಡುತ್ತಾರೆ ಗೊತ್ತಿಲ್ಲ. ಮೋದಿ ಅವರ ಜೊತೆ ಕುಮಾರಸ್ವಾಮಿ ಮಾತಾಡಿ ಸೀಟು ಫೈನಲ್ ಮಾಡುತ್ತಾರೆ. ಸೀಟು ಅಂತಿಮವಾದ ಬಳಿಕ ಎಲ್ಲಾ ಕ್ಷೇತ್ರಕ್ಕೂ ಹೋಗಿ ಪ್ರಚಾರ ಮಾಡುತ್ತೇನೆ. ವ್ಹೀಲ್‌ಚೇರ್‌ನಲ್ಲೇ ಹೋಗಿ ಪ್ರಚಾರ ಮಾಡುತ್ತೇನೆ. ಎಲ್ಲರೂ ಬೆಂಬಲ ಕೊಡಿ ಎಂದು ಮನವಿ ಮಾಡಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!