ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಚ್ಚು ಹಿಡಿದುಕೊಂಡು ಹೋಗುವ ವ್ಯಕ್ತಿಗೆ ಸಚಿವ ಸ್ಥಾನ ಕೊಟ್ಟಿದ್ದೀರಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ.
ಧಮ್ಕಿ ಹಾಕಿ ದೌರ್ಜನ್ಯ ಎಸಗಿಸಿದ ಆರೋಪ ಎದುರಿಸುತ್ತಿರುವ ಯೋಜನೆ ಹಾಗೂ ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು.ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ದಲಿತರ ಉದ್ಧಾರಕ ಅಂತ ಸಿದ್ದರಾಮಯ್ಯ ಅವರು ಹೇಳುತ್ತಾರೆ. ಬೇರೆ ಪಕ್ಷದವರಿಗೆ ಮಾನ ಮರ್ಯಾದೆ ಇದೆಯಾ ಅಂತಾ ಕೇಳುತ್ತೀರ, ನಿಮಗೇನಾದರೂ ಮಾನಮರ್ಯಾದೆ ಇದೆಯಾ ಸಿದ್ದರಾಮಯ್ಯನವರೇ? ಅಟ್ರಾಸಿಟಿ ಕೇಸ್ ಹಾಕಿದ್ದಾರೆ. ಅಧಿಕಾರಿಗಳಿಗೆ ಎಷ್ಟು ಗಂಟೆಯಲ್ಲಿ ನೀವು ದೂರವಾಣಿ ಕರೆ ಮಾಡಿದ್ದೀರಿ? ಆ ಅಧಿಕಾರಿಯನ್ನು ಮೊದಲು ಅಮಾನತು ಅಂತಾ ಮಾತನಾಡಿದ್ದೀರಿ. ಇದೇನಾ ನೀವು ದಲಿತರ ಪರ ಅಂತಾ ಹೇಳುವುದು ಎಂದರು.
ಅಧಿಕಾರಿಗಳನ್ನು ಬಹಳ ಕೀಳಾಗಿ ನಡೆಸಿಕೊಳ್ಳುತ್ತಿದ್ದೀರಿ. ಎಫ್ ಐ ಆರ್ ದಾಖಲಿಸಿದ ಅಧಿಕಾರಿಯನ್ನು ದಾಖಲೆಗಳನ್ನು ತೆಗೆದುಕೊಂಡು ಮನೆಗೆ ಬಾ ಅಂತ ಬೆದರಿಕೆ ಹಾಕುತ್ತೀರಿ. ಹೆಣ್ಣು ಮಗಳ ಮೇಲೆ ಮಚ್ಚು, ಕೊಡಲಿ ಹಿಡಿದು ಬೆದರಿಸಲು ಹೊರಟಿದ್ದೀರಲ್ಲಾ? ಜನ ಇದಕ್ಕೇನಾ ನಿಮಗೆ ಮತ ಹಾಕಿದ್ದು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಚ್ಚು, ಕೊಡಲಿ, ಕತ್ತಿ ಹಿಡಿಯುವವರನ್ನು ಮಂತ್ರಿ ಮಾಡಿಕೊಂಡಿದ್ದೀರಲ್ಲಾ, ದಲಿತರ ಪರ ಕಾಳಜಿ ಇರುವ ವಿಧೇಯಕವನ್ನು ಬೇರೆ ಬೇರೆ ಸದನದಲ್ಲಿ ಪಾಸ್ ಮಾಡಿಕೊಂಡಿದ್ದೀರಲ್ಲ, ಕಸದ ಬುಟ್ಟಿಗೆ ಹಾಕಲಿಕ್ಕೆ ಆ ಬಿಲ್ ಅನ್ನು ಪಾಸ್ ಮಾಡಿಕೊಂಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.