ಹೊಸದಿಗಂತ ಡಿಜಿಟಲ್ ಡೆಸ್ಕ್:
ಸನಾತನ ಧರ್ಮದ ಕುರಿತು ಡಿಎಂಕೆ ನಾಯಕರ ಸರಣಿ ಹೇಳಿಕೆ ವಿರುದ್ಧ ಬಿಜೆಪಿ ಸಿಡಿದೆದ್ದಿದ್ದು, I.N.D.I.A ಒಕ್ಕೂಟದ ನಾಯಕರು ಪ್ರತಿಕ್ರಿಯೆ ನೀಡದೆ ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದೆ.
ಈ ಕುರಿತು ಸುದ್ದಿಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಯಾರೋ ಒಬ್ಬರನ್ನು ಓಲೈಸಿ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
I.N.D.I.A ಒಕ್ಕೂಟವು ಸನಾತನ ಧರ್ಮ ನಿರ್ಮೂಲನೆಯನ್ನು ತನ್ನ ಪ್ರಮುಖ ಅಜೆಂಡಾವಾಗಿಸಿಕೊಂಡಿದೆ.ಸೋನಿಯಾ ಗಾಂಧಿ ಈ ವಿವಾದದ ಬಗ್ಗೆ ಇಲ್ಲಿಯವರೆಗೂ ಮಾತನಾಡದೆ ಮೌನ ವಹಿಸಿದ್ದಾರೆ. ಈ ಕೂಡಲೇ I.N.D.I.A ಒಕ್ಕೂಟದ ನಾಯಕರು ಡಿಎಂಕೆ ಸದಸ್ಯರ ಹೇಳಿಕೆ ಕುರಿತು ತಮ್ಮ ನಿಲುವನ್ನು ತಿಳಿಸಬೇಕು ಎಂದು ಆಗ್ರಹಿಸಿದ್ಧಾರೆ.
ಡಿಎಂಕೆ ನಾಯಕರು ಸನಾತನ ಧರ್ಮದಲ್ಲಿ ಜಾತಿ ತಾರತಮ್ಯದ ವಿರುದ್ಧ ತಾವು ಮಾತನಾಡಿದ್ದು ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ನವರು ನಾವು ಧರ್ಮದಲ್ಲಿ ನಂಬಿಕೆ ಇರಿಸಿದ್ದೇವೆ ಎಂದು ಹೇಳುವ ಮೂಲಕ ಅಂತರವನ್ನು ಕಾಯ್ದುಕೊಂಡಿದ್ದಾರೆ. ಆದರೆ, I.N.D.I.A ಒಕ್ಕೂಟದ ಪಕ್ಷಗಳಾದ ಆರ್ಜೆಡಿ ಹಾಗೂ ಸಮಾಜವಾದಿ ಪಕ್ಷ ಸನಾತನ ಧರ್ಮ ಹಾಗೂ ಹಿಂದು ಧರ್ಮಕ್ಕೆ ಸೇರಿದ ಪವಿತ್ರ ಗ್ರಂಥಗಳ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಅದೇ ರೀತಿ ಬೇರೆ ಧರ್ಮದ ಬಗ್ಗೆ ಮಾತನಾಡಲು ಇವರಿಗೆ ಧೈರ್ಯ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ಭಾರತದ ಸಂಸ್ಕೃತಿ ಹಾಗೂ ಪರಂಪರೆಯನ್ನು I.N.D.I.A ಒಕ್ಕೂಟದ ನಾಯಕರು ಅವಮಾನಿಸುತ್ತಿದ್ದಾರೆ. ಸನಾತನ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಪದೇ ಪದೇ ಈ ರೀತಿ ಹೇಳಿಕೆ ನೀಡುತ್ತಿದ್ದಲ್ಲಿ ಮುಂಬರುವ ದಿನಗಳಲ್ಲಿ ಜನತೆ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದುರವಿಶಂಕರ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.