ಉಪ್ಪಿಟ್ಟು ಅಂದಾಕ್ಷಣ ಮೂಗು ಮುರಿಯುವ ಮಂದಿಗೇನೂ ಕಡಿಮೆಇಲ್ಲ. ಆದ್ರೆ ಈ ರೀತಿ ಮಾಡುವ ಉಪ್ಪಿಟ್ಟು ಪ್ರತಿಯೊಬ್ಬರೂ ಇಷ್ಟ ಪಟ್ಟು ತಿನ್ನುತ್ತಾರೆ. ಇದೇ ಈ ಉಪ್ಪಿಟ್ಟಿನ ಸ್ಪೆಷಲ್! ಹಾಗಾದ್ರೆ ಈ ಸ್ಪೆಷಲ್ ಉಪ್ಪಿಟ್ಟು ಮಾಡೋದು ಹೇಗೆ ನೋಡೋಣವೇ…
ಬೇಕಾಗುವ ಸಾಮಾಗ್ರಿ: ಹುರಿದ ರವೆ 1 ಬಟ್ಟಲು, ಮೆಂತೆ ಮತ್ತು ಪಾಲಕ್ ಸೊಪ್ಪು ಒಂದು ಕಟ್ಟು, ಈರುಳ್ಳಿ ಸಾಧಾರಣ ಗಾತ್ರದ್ದು 2, ಹಸಿಮೆಣಸಿನ ಕಾಯಿ 2, ಕಡ್ಲೆಬೇಳೆ ಒಂದು ಟೀ ಸ್ಪೂನ್, ನೆಲಗಡೆ 3 ಟೀ ಸ್ಪೂನ್, ಉದ್ದಿನ ಬೇಳೆ 1 ಟೀ ಸ್ಪೂನ್, ಕರಿಬೇವು ಸ್ವಲ್ಪ, ಒಗ್ಗರಣೆಗೆ ಶುದ್ಧ ತೆಂಗಿನೆಣ್ಣೆ 5 ಟೀ ಸ್ಪೂನ್, ಸಾಸಿವೆ ಕಾಳು ಅರ್ಧ ಟೀ ಸ್ಪೂನ್, ನಿಂಬೆ ರಸ ಎರಡು ಟೀ ಸ್ಪೂನ್.
ಮಾಡುವ ವಿಧಾನ: ಚೆನ್ನಾಗಿ ತೊಳೆದ ಮೆಂತೆ ಮತ್ತು ಪಾಲಕ್ ಸೊಪ್ಪನ್ನು ಹೆಚ್ಚಿಟ್ಟುಕೊಳ್ಳಿ. ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ಸ್ಟೌ ಮೇಲೆ ಬಾಣಲೆಯಿಟ್ಟು ತೆಂಗಿನೆಣ್ಣೆ ಹಾಇ. ಉದ್ದಿನ ಬೇಳೆ, ನೆಲಗಡಲೆ, ಕಡಲೆ ಬೇಳೆ ಹಾಕಿ ಸರಿಯಾಗಿ ಫ್ರೈ ಮಾಡಿ. ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ, ಹಸಿಮೆಣಸನ್ನು ಹೆಚ್ಚಿಕೊಂಡು ಬಾಣಲೆಗೆ ಹಾಕಿ ಹುರಿಯಿರಿ. ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆಯೇ ಮಿಕ್ಸಿ ಜಾರಿನಲ್ಲಿರುವ ಮಿಶ್ರಣವನ್ನು ಸೇರಿಸಿ ಸರಿಯಾಗಿ ಬೇಯಿಸಿ. ಎರಡು ಬಟ್ಟಲಾಗುವಷ್ಟು ನೀರು ಹಾಕಿ ಸರಿಯಾಗಿ ಕುದಿಯಲು ಬಿಡಿ. ನಂತರ ಹುರಿದಿಟ್ಟುಕೊಂಡ ರವೆ ಸೇರಿಸಿ. ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಗೊಟಾಯಿಸಿ. ಚೆನ್ನಾಗಿ ಗುಳ್ಳೆಗಳು ಬಂದಾಗ ಸ್ಟೌ ಆಫ್ ಮಾಡಿಡಿ. ಐದು ನಿಮಿಷಗಳ ನಂತರ ನಿಂಬೆ ರಸ ಸೇರಿಸಿ ಮಿಶ್ರ ಮಾಡಿ. ಬಿಸಿ ಬಿಸಿಯಿರುವಾಗಲೇ ತಿನ್ನಲು ನೀಡಿ. ಈ ಉಪ್ಪಿಟ್ಟು ಸಕತ್ ಟೇಸ್ಟಿಯಾಗಿರುತ್ತದೆ.