ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ 161 ತಾಲೂಕುಗಳನ್ನು ತೀವ್ರ ಬರಪೀಡಿತ ಎಂದು ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರ ಬರ ನಿರ್ವಹಣೆ ಕೈಪಿಡಿ-2020ರಲ್ಲಿ ನೀಡಿರುವ ಬರ ಘೋಷಣೆಯ ಮಾರ್ಗಸೂಚಿ ಅನ್ವಯ ಬರ ಘೋಷಣೆಯ ಮಾನದಂಡಗಳನ್ನು ಪರಿಗಣಿಸಿ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ಈ ಪೈಕಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳು ಮತ್ತು 34 ಸಾಧಾರಣ ಬರಪೀಡಿತ ತಾಲೂಕುಗಳೆಂದು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ 6 ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಘೋಷಿಸಿ ಆದೇಶ ಹೊರಡಿಸಲಾಗಿದೆ.
ಜಿಲ್ಲಾಧಿಕಾರಿಗಳಿಂದ ಬೆಳೆಹಾನಿ ಸಮೀಕ್ಷೆ ನಡೆಸಲಾಗಿದ್ದು, ಅವರ ವರದಿಯ ಅನುಸಾರ ಸರ್ಕಾರವು ಈ ಘೋಷಣೆಯನ್ನು ಮಾಡಿದೆ.
ಜೂನ್ ತಿಂಗಳಲ್ಲಿ ಶೇ.56 ಮಳೆ ಕೊರತೆ ಉಂಟಾಗಿದೆ. ಜುಲೈಯಲ್ಲಿ ಶೇ.29 ಹೆಚ್ಚು ಮಳೆಯಾಗಿದ್ದರೂ ಅದು ಒಂದು ವಾರದಲ್ಲಿ ಕೇಂದ್ರೀಕೃತಗೊಂಡಿದೆ. ಆಗಸ್ಟ್‌ನಲ್ಲಿ ವಾಡಿಕೆಗಿಂತ ಶೇ.73 ಮಳೆ ಕೊರತೆಯಾಗಿದ್ದು, ಕಳೆದ 125 ವರ್ಷಗಳಲ್ಲಿ ಅತಿ ಕಡಿಮೆ ಮಳೆ ದಾಖಲಾಗಿದೆ ಎಂದು ಸರ್ಕಾರ ಗಮನಿಸಿದೆ.
ಜಿಲ್ಲಾಧಿಕಾರಿಗಳು ಬರ ನಿರ್ವಹಣೆಯ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸೂಚಿಸಿದೆ. ಕಾಲಕಾಲಕ್ಕೆ SDRF/NDRF ನಿಯಮಗಳನ್ವಯ ಮಾರ್ಗಸೂಚಿ ನೀಡುವುದಾಗಿ ಹೇಳಿದೆ.
ನಿನ್ನೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿ 161 ತಾಲೂಕುಗಳು ಬರ ಪೀಡಿತ ಮತ್ತು ಈ ಕುರಿತು ಘೋಷಿಸಲು ಸರಕಾರಕ್ಕೆ ಶಿಫಾರಸ್ಸು ಮಾಡುತ್ತೇವೆ, ಶೀಘ್ರದಲ್ಲಿ ಬರಪೀಡಿತ ತಾಲೂಕುಗಳ ಪಟ್ಟಿ ಘೋಷಿಸಲಾಗುತ್ತದೆ ಎಂದು ತಿಳಿಸಿದ್ದರು.