ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಯ ಮುಂದೆ ನಿದ್ದೆಗೆ ಜಾರಿದ್ದವರ ಮೇಲೆ ಟೆಂಪೊ ಹರಿದು ಓರ್ವ ಮಹಿಳೆ ಮತ್ತು ಆಕೆಯ 4 ವರ್ಷದ ಮಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ಉತ್ತರ ದೆಹಲಿಯ ಮಜ್ನು ಕಾ ತಿಲ ಸಮೀಪದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ವೇಗವಾಗಿ ಬಂದ ಟೆಂಪೊ ಮಲಗಿದ್ದವರ ಮೇಲೆ ಹರಿದಿದೆ. ಇದರ ಪರಿಣಾಮ ತಾಯಿ ಮಗು ಸಾವನ್ನಪ್ಪಿದ್ದು, ಮೂರು ಮಂದಿ ಗಾಯಗೊಂಡಿದ್ದಾರೆ. ಈ ಕುರಿತು ಪೊಲೀಸರಿಗೆ ಇಂದು ಬೆಳಗಿನ ಜಾವ ಮಾಹಿತಿ ದೊರೆತಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಾಯಾಳುಗಳನ್ನುಆಸ್ಪತ್ರೆಗೆ ಕರೆದೊಯ್ಯಿತಾದರೂ ಜ್ಯೋತಿ (32) ಅವರು ಮಾರ್ಗಮಧ್ಯೆಯೇ ಪ್ರಾಣ ಬಿಟ್ಟಿದ್ದಾರೆ. ಮಗು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಭಾಷ್ (30) ಹಾಗೂ 6 ಮತ್ತು 17 ವಯಸ್ಸಿನ ಇಬ್ಬರು ಮಕ್ಕಳು ಘಟನೆಯಲ್ಲಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ.
ಆರೋಪಿ ಚಾಲಕ ದಿನೇಶ್ ರೈ ಅನ್ನು ಬಂಧಿಸಲಾಗಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.