ಮೈತ್ರಿಕೂಟ ಗಟ್ಟಿಗೊಳಿಸಲು ತಮಿಳುನಾಡಿಗೆ ನೀರು ಬಿಟ್ಟ ಕಾಂಗ್ರೆಸ್ ಸರಕಾರ: ಪ್ರಲ್ಹಾದ್ ಜೋಶಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಚುನಾವಣೆ ಉದ್ದೇಶದಿಂದ I.N.D.I.A. ಮೈತ್ರಿ ಕೂಟ ಗಟ್ಟಿಗೊಳಿಸಿಕೊಳ್ಳಲು ರಾಜ್ಯ ಕಾಂಗ್ರೆಸ್ ತಮಿಳುನಾಡಿಗೆ ನೀರು ಹರಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ದೆಹಲಿಯಲ್ಲಿಂದು ಮಾತನಾಡಿದ ಅವರು, ಕರ್ನಾಟಕದ ಹಿತ ಕಾಪಾಡಲು ನಾವು ಬದ್ಧರಾಗಿದ್ದೇವೆ. ಆದರೆ ರಾಜ್ಯ ಸರ್ಕಾರ ಮೊದಲು ನೀರು ಹರಿಸಿ ಈಗ ಬಂದು ಸಭೆ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಮೈತ್ರಿ ಗಟ್ಟಿಗೊಳಿಸಲು ತಮಿಳುನಾಡಿಗೆ ನೀರು ಹರಿಸಿ, ಈಗ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಇದು ಸರಿಯಲ್ಲ, ಹೀಗಾಗಬಾರದು ಎಂದು ನೇರವಾಗಿ ಸಭೆಯಲ್ಲೇ ಹೇಳಿದ್ದೇನೆ. ನೀವು ಮೊದಲು ನೀರು ಹರಿಸುವಾಗ ಯಾರನ್ನು ಕೇಳಿದ್ರಿ? ಆಗ ನಿಮಗೆ ಸಂಸದರ ನೆನಪು ಆಗಲಿಲ್ವಾ‌? ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದು ನೇರವಾಗಿ ಹೇಳಿದ್ದೇನೆ ಎಂದು ಹೇಳಿದರು.

ನಾಳೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಇದೆ. ನಮ್ಮಲ್ಲಿ ನೀರು ಇಲ್ಲ ಎಂದು ಅಫಿಡವಿಟ್ ಹಾಕ್ತಾರೆ. ಮತ್ತೆ ಅತ್ತ ಯಾವುದೋ ಒತ್ತಡದಲ್ಲಿ ತಮಿಳುನಾಡಿಗೆ ನೀರು ಹರಿಸ್ತಾರೆ. ತಮಿಳುನಾಡಿಗೆ ನೀರು ಹರಿಸುವ ಮೊದಲು ಮೀಟಿಂಗ್ ಮಾಡಬೇಕಿತ್ತು, ಚರ್ಚೆ ಮಾಡಬೇಕಿತ್ತು. ಕರ್ನಾಟಕದ ಹಿತ ಕಾಪಾಡಲು ನಾವು ಬದ್ಧರಾಗಿದ್ದೇವೆ ಎಂದು ಮಾಹಿತಿ ನೀಡಿದರು.

ನಿನ್ನೆ ಡಿಕೆಶಿ ನನ್ನ ಭೇಟಿಯಾಗಿದ್ದಾರೆ: ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಲು ಅವರಿಗೆ ಅವಕಾಶ ಸಿಕ್ಕಿದೆ. ಸಂಸದರು ಏನು ಮಾಡಿಲ್ಲ ಅಂತ ವೃಥಾ ಆರೋಪ ಮಾಡುವುದು ತಪ್ಪು. ಸುಮ್ಮನೇ ರಾಜಕೀಯ ಮಾಡಬಾರದು, ಜನ ತಿರುಗಿಬಿದ್ದ ನಂತರ ಈಗ ಬಂದು ಸಭೆ ಮಾಡ್ತಿದ್ದಾರೆ. ಕಾವೇರಿ ನೀರನ್ನು ಹರಿಸುವ ಕುರಿತಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಿನ್ನೆ ನನ್ನನ್ನು ಬಂದು ಭೇಟಿಯಾಗಿದ್ದಾರೆ. ಇದರಲ್ಲಿ ಕೇವಲ ರಾಜಕೀಯಕ್ಕೋಸ್ಕರ ಪ್ರಧಾನಮಂತ್ರಿ ಜೊತೆ ಮಾತಾಡ್ತಿವಿ ಅಂತ ಹೇಳೋಕೆ ಆಗಲ್ಲ. ತಮಿಳುನಾಡು ಸಿಎಂ ಅವರನ್ನು ತಬ್ಬಿಕೊಂಡು ಸಭೆ ಮಾಡಿದವರು ಯಾರು? ಆಗ ಕೇಳದವರು ಈಗ ಕೇಂದ್ರವನ್ನು ಕೇಳ್ತಿದ್ದಾರೆ‌ ಎಂದು ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!