ಹೊಸದಿಗಂತ ಡಿಜಿಟಲ್ ಡೆಸ್ಕ್:
ವಸತಿ ಶಾಲೆಯ ಗೋಡೆ ಕುಸಿದು ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ರಾಮನಗರದ ಚನ್ನಪಟ್ಟಣ ತಾಲ್ಲೂಕಿನ ಎಚ್.ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಈ ದುರಂತ ಸಂಭವಿಸಿದ್ದು, 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಕೌಶಿಕ್ ಸಾವನ್ನಪ್ಪಿದ್ದಾನೆ.
ವಿದ್ಯಾರ್ಥಿ ಬೆಳಗ್ಗೆ ಮುಖ ತೊಳೆಯಲು ಹಾಸ್ಟೆಲ್ ಹೊರಗೆ ನಿರ್ಮಿಸಲಾದ ಸಿಮೆಂಟ್ ಟ್ಯಾಂಕ್ ಬಳಿ ಹೋಗಿದ್ದಾನೆ. ಈ ವೇಳೆ ಗೋಡೆ ಕುಸಿದು ಬಿದ್ದಿದ್ದು, ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೋರ್ವ ವಿದ್ಯಾರ್ಥಿಯ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಮೃತ ವಿದ್ಯಾರ್ಥಿಯ ಶವವನ್ನು ದಯಾನಂದ ಆಸ್ಪತ್ರೆ ಶವಗಾರಕ್ಕೆ ರವಾನಿಸಲಾಗಿದೆ.
ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.