ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಮತ್ತೆ ನೀರು ಹರಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸುಪ್ರೀಂ ಆದೇಶ ನೀಡಿದ ನಂತರದಿಂದ ಕರ್ನಾಟಕದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಇಂದು ಕೂಡ ಪ್ರತಿಭಟನೆ ಮುಂದುವರಿಯುತ್ತದೆ. ಪ್ರಮುಖವಾಗಿ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಭಾಗದಲ್ಲಿ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ರೈತ ಹಿತರಕ್ಷಣಾ ಸಮಿತಿ ಇಂದು ಮಂಡ್ಯ ಬಂದ್‌ಗೆ ಕರೆ ನೀಡಿದ್ದು, ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ಮಂಡ್ಯ ನಗರ ಬಂದ್ ಆಗಲಿದೆ. ಇನ್ನು ಖಾಸಗಿ ಬಸ್, ಆಟೋ ಕೂಡ ವಿರಳ. ನಗರದಾದ್ಯಂತ ರೈತರು ಬೈಕ್ ರ‍್ಯಾಲಿಗೆ ತಯಾರಾಗಿದ್ದು, ರಾಜಕೀಯ ನಾಯಕರು ಸಾಥ್ ನೀಡಲಿದ್ದಾರೆ.
ಎಚ್‌ಡಿ ಕುಮಾರಸ್ವಾಮಿ, ಸಿಟಿ ರವಿ ಕೂಡ ಬೈಕ್‌ರ‍್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿಯೂ ಪ್ರತಿಭಟನೆ ನಡೆಯಲಿದ್ದು ಬಿಜೆಪಿ ನಾಯಕರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಮಂಡ್ಯ ರಕ್ಷಣಾ ವೇದಿಕೆ ರಸ್ತೆಯಲ್ಲಿ ಟೀ ಮಾಡಿ ಕುಡಿದು ಪ್ರೊಟೆಸ್ಟ್ ಮಾಡ್ತಿದ್ದಾರೆ. ಟೀ ಮಾಡಲು ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಸುಡಲಾಗುತ್ತಿದೆ. ಕಾವೇರಿ ಹಿತರಕ್ಷಣಾ ಸಮಿತಿ ಇಂದು ಮದ್ದೂರು ಬಂದ್‌ಗೆ ಕರೆ ನೀಡಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಜನರು ಬಂದ್‌ಗೆ ಸಾಥ್ ನೀಡಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು ಸರಣಿ ಪ್ರತಿಭಟನೆಗಳು ನಡೆಯಲಿದ್ದು, ಕನ್ನಡಪರ ಸಂಘಟನೆಗಳು ಮಲ್ಲೇಶ್ವರಂನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಇನ್ನು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಹೋರಾಟ ನಡೆಸಲಿದ್ದು, ಬಿಜೆಪಿಯ ಗಣ್ಯರು ಭಾಗಿಯಾಗಲಿದ್ದಾರೆ.
ಇನ್ನು ವಾಟಾಳ್ ನಾಗರಾಜ್ ಸುದ್ದಿಗೋಷ್ಠಿ ಕರೆದಿದ್ದು, ಕರ್ನಾಟಕ ಬಂದ್‌ಗೆ ಕರೆಕೊಡುವ ಸಾಧ್ಯತೆ ಇದೆ.