ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಇಂದು ಹಲವು ಕನ್ನಡ ಪರ ಸಂಘಟನೆಗಳು ʻಬೆಂಗಳೂರು ಬಂದ್ʼಗೆ ಕರೆ ಕೊಟ್ಟಿವೆ. ‘ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಬೆಂಗಳೂರು’ ಸಂಘಟನೆಯ ನೇತೃತ್ವದಲ್ಲಿ ಬಂದ್ ನಡೆಯುತ್ತಿದ್ದು, ಇಂದು ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಬಂದ್ ಇರಲಿದೆ. ಅದರಂತೆ ಇಂದು ಬೆಳಗ್ಗೆಯಿಂದಲೇ ಖಾಸಗಿ ವಾಹನಗಳು ಓಡಾಡದೆ ಸಿಲಿಕಾನ್ ಸಿಟಿ ರಸ್ತೆಗಳು ಬಿಕೋ ಎನ್ನುತ್ತಿವೆ.
ಬಂದ್ಗೆ ನೈತಿಕ ಬೆಂಬಲ
ಬೆಂಗಳೂರು ಬಂದ್ ಬೆಂಬಲಿಸಿ ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಖಾಸಗಿ ಸಾರಿಗೆ ಸಂಘಟನೆಗಳು, ಶಿಕ್ಷಕರ ಸಂಘಟನೆ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಕೈ ಜೋಡಿಸಿವೆ. ಅದರಂತೆ ಎಫ್ಕೆಸಿಸಿಐ, ಬೀದಿ ಬದಿ ವ್ಯಾಪಾರಸ್ಥರೂ ನೈತಿಕ ಬೆಂಬಲ ಸೂಚಿಸಿವೆ.
ನಗರದಲ್ಲಿ 144ಸೆಕ್ಷನ್ ಜಾರಿ
ಇನ್ನೂ ಒತ್ತಾಯಪೂರ್ವಕ ಬಂದ್ ನಡೆಸದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ಅದಕ್ಕಾಗಿ ಮಧ್ಯರಾತ್ರಿಯಿಂದಲೇ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿಯಾಗಿದೆ.
ಬೆಂಗಳೂರು ನಗರದಾದ್ಯಂತ ನಿನ್ನೆ ಮಧ್ಯರಾತ್ರಿ 12 ಗಂಟೆಯಿಂದ ಇಂದು ಮಧ್ಯರಾತ್ರಿ 12 ಗಂಟೆಯವರೆಗೆ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಬಲವಂತವಾಗಿ ಅಂಗಡಿ, ಹೋಟೆಲ್, ಕಚೇರಿಗಳನ್ನು ಬಂದ್ ಮಾಡಿಸದಂತೆ ಎಚ್ಚರಿಕೆ ನೀಡಿದರು. ನಿಷೇಧಾಜ್ಞೆ ಜಾರಿ ಹಿನ್ನೆಲೆ ನಗರದಾದ್ಯಂತ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.