ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನರಿಗೆ ಸೋಷಿಯಲ್ ಮೀಡಿಯಾ ಎಷ್ಟು ಪ್ರಯೋಜಕಾರಿಯೋ ಅಷ್ಟೇ ಅಪಾಯಕಾರಿಯಾಗಿವೆ ಎಂದು ಬಾಂಬೆ ಹೈಕೋರ್ಟ್ನ ಗೋವಾ ಪೀಠದ ನ್ಯಾಯಮೂರ್ತಿ ಮಹೇಶ್ ಸೋನಕ್ ಶನಿವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಜನರನ್ನು ಹೆಚ್ಚು ಸೆಳೆಯುತ್ತಿವೆ.ಆದರೆ, ಇಂತಹ ಮಾಧ್ಯಮಗಳ ಮೇಲೆ ಕಡಿವಾಣ ಹಾಕುವ ಯಾವುದೇ ಸಂಘಟಿತ ಪ್ರಯತ್ನಗಳು ನಡೆದಿಲ್ಲ. ಇದು ಸ್ವಸ್ಥ ಸಮಾಜಕ್ಕೆ ಕೆಲವೊಮ್ಮೆ ಮಾರಕವಾಗಿ ಪರಿಣಮಿಸುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗೋವಾದಲ್ಲಿನ ಕಾಲೇಜೊಂದರಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆಗಿನ ಸಂವಾದದ ವೇಳೆ ಮಾತನಾಡಿದ ಅವರು, ಹಲವಾರು ವಿಷಯಗಳನ್ನು ತಿಳಿಯದೇ, ಓದದೇ ನಿರ್ಧಾರಕ್ಕೆ ಬರುತ್ತಿದ್ದೇವೆ. ಇದು ತಪ್ಪು ಮಾಹಿತಿಯನ್ನು ಹರಡುವ ಮೂಲಕ ಅನರ್ಥಕ್ಕೆ ಕಾರಣವಾಗುತ್ತಿದೆ. ನಾವು ಕಂಪ್ಯೂಟರ್ ಮತ್ತು ಸ್ಮಾರ್ಟ್ಫೋನ್ಗಳಂತಹ ಯಂತ್ರಗಳನ್ನೇ ಆಧಾರವಾಗಿಟ್ಟುಕೊಂಡಿದ್ದರಿಂದ, ಯೋಚಿಸುವ ಪ್ರಯತ್ನ ಕೂಡ ಮನುಷ್ಯ ಮಾಡುತ್ತಿಲ್ಲ. ಇದರ ಪರಿಣಾಮವಾಗಿ ನಾವು ಪರಿಸ್ಥಿತಿ ಮತ್ತು ಮನುಷ್ಯರ ಮೇಲೆಯೇ ಅನುಮಾನ ಪಡುತ್ತಿದ್ದೇವೆ ಎಂದು ಹೇಳಿದರು .
ಇಂದು ನಾವು ಕೃತಕ ಬುದ್ಧಿಮತ್ತೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದೇವೆ. ನಮ್ಮ ಬುದ್ಧಿವಂತಿಕೆಯಿಂದ ಮಾಡಬೇಕಾದ ಪ್ರತಿ ಕೆಲಸಗಳನ್ನು ಯಂತ್ರ ಅಥವಾ ಅಲ್ಗಾರಿದಮ್ ಮೊರೆ ಹೋಗುತ್ತಿರುವುದು ಸಮಸ್ಯೆಗಳ ದಿನಗಳು ಸಮೀಪಿಸುತ್ತಿವ ಸೂಚನೆ ಇರಬಹುದು. ಮನುಷ್ಯ ಮತ್ತು ಯಂತ್ರದ ನಡುವೆ ಯಾವುದೇ ವ್ಯತ್ಯಾಸ ಇಲ್ಲದಂತಾಗಿದೆ. ಹಾಗೆಯೇ ಆಲೋಚನಾ ಸಾಮರ್ಥ್ಯಗಳನ್ನು ಕ್ಷೀಣಿಸಲು ಬಿಡಬಾರದು. ಕನಿಷ್ಠ ಪಕ್ಷ ಮಾನವಕುಲದ ವಿಶೇಷ ಗುಣವಾದ ಮಾನವೀಯತೆಯೂ ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಾವು ಯಾವಾಗಲೂ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಮಾಹಿತಿ ಮತ್ತು ಸುದ್ದಿಗಳ ಸತ್ಯಾಸತ್ಯತೆಗಳನ್ನು ಅರಿಯಬೇಕು. ಸ್ಪಷ್ಟವಾಗಿ, ಸ್ವತಂತ್ರವಾಗಿ ಮತ್ತು ನಿರ್ಭಯವಾಗಿ ಆಲೋಚಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಈ ಮೂಲಕ ಪ್ರತಿ ನಿಮಿಷವೂ ಶಕ್ತಿಯುತವಾಗಿ ಬೆಳೆಯುತ್ತಿರುವ ಸಮೂಹ ಮಾಧ್ಯಮ ಸಾಧನಗಳು ನಿರಂತರವಾಗಿ ನೀಡುವ ವಿಷಯಗಳ ಶೋಧ, ವಿಮರ್ಶೆ, ಅಗತ್ಯವಿದ್ದಲ್ಲಿ ತಿರಸ್ಕರಿಸುವುದನ್ನೂ ನಾವು ಕಲಿಯಬೇಕು ಎಂದು ಹೇಳಿದರು.