ಹೊಸದಿಗಂತ ವರದಿ,ಸಕಲೇಶಪುರ :
ಕರ್ತವ್ಯ ಲೋಪ ಹಿನ್ನೆಲೆ ಸಕಲೇಶಪುರ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಪುರುಷೋತ್ತಮ ಅವರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 11 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಸಕಲೇಶಪುರ ತಾಲೂಕಿನ ಆನೇಮಹಲ್ ನಿವಾಸಿ ಮೋಹನ್ ಕುಮಾರ್ ಎಂಬುವರು, ತಮ್ಮ ಪತ್ನಿ ವಿ.ಎಂ ಆಶಾ ಅವರಿಗೆ ಹೆರಿಗೆ ಪೂರ್ವ ಚೆಕಪ್‌ಗಾಗಿ ಕ್ರಾಫರ್ಡ್ ಆಸ್ಪತ್ರೆಗೆ 2021 ಮಾ.26 ರಂದು ಬೆಳಗ್ಗೆ 11 ಗಂಟೆಗೆ ಕರೆದುಕೊಂಡು ಬ೦ದಿದ್ದರು. ಆದರೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಪುರುಷೋತ್ತಮ ಅವರು ಸಂಜೆ 4 ಗಂಟೆಗೆ ಬರುವುದಾಗಿ ತಿಳಿಸಿದ್ದರು. ಅದರಂತೆ ಸಂಜೆ 4 ಗಂಟೆಗೆ ಆಸ್ಪತ್ರೆಗೆ ಆಗಮಿಸಿದ ಅವರು ಗರ್ಭಿಣಿಯನ್ನು ಪರೀಕ್ಷಿಸಿ ಸ್ಕ್ಯಾನ್ ವರದಿಯನ್ವಯ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದೆ ಎಂದು ತಿಳಿಸಿದ್ದರು. ತಕ್ಷಣವೇ ಮೋಹನ್ ಕುಮಾರ್ ತಮ್ಮ ಪತ್ನಿಯ ಆರೋಗ್ಯದ ದೃಷ್ಟಿಯಿಂದ ಗರ್ಭಪಾತ ಶಸ್ತ್ರ ಚಿಕಿತ್ಸೆ ಮಾಡುವಂತೆ ವೈದ್ಯರಲ್ಲಿ ಕೇಳಿಕೊಂಡರೂ ಶಸ್ತ್ರಚಿಕಿತ್ಸೆ ಮಾಡದೆ ಇಂಜೆಕನ್ ಕೊಟ್ಟಿದ್ದರು. ಬಳಿಕ ಅದೇ ದಿನ ರಾತ್ರಿಯೇ ಆಶಾ ಹೊಟ್ಟೆ ನೋವಿನಿಂದ ನರಳಾಡಿ, ಪಿಡ್ಸ್ ಸ್ಥಿತಿಗೆ ಹೋಗಿದ್ದರು. ಮರುದಿನ ಬೆಳಗ್ಗೆ ಬಂದ ಡಾ.ಪುರುಷೋತ್ತಮ, ಆಶಾ ಅವರನ್ನು ಪರೀಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಆಶಾ ಅವರಿಗೆ ಗರ್ಭಪಾತವಾಗಿ 2021, ಮಾ. 29 ರಂದು ಹೆಚ್ಚಿನ ರಕ್ತಸ್ರಾವದಿಂದ ಮೃತಪಟ್ಟಿದ್ದರು.
ಡಾ. ಪುರುಷೋತ್ತಮ ಅವರ ನಿರ್ಲಕ್ಷ್ಯವೇ ನನ್ನ ಪತ್ನಿ ಸಾವಿಗೆ ಕಾರಣಎಂದು ಆರೋಪಿಸಿ ಪತಿ ಮೋಹನ್ ಕುಮಾರ್, ಪರಿಹಾರಕ್ಕಾಗಿ ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಆಯೋಗದ ಅಧ್ಯಕ್ಷರಾದ ಚಂಚಲ ಸಿ.ಎಂ, ಸದಸ್ಯರಾದ ಹೆಚ್.ವಿ.ಮಹದೇವ ಹಾಗೂ ಮಹಿಳಾ ಸದಸ್ಯರಾದ ಅನುಪಮ.ಆರ್ ಅವರನ್ನೊಳಗೊಂಡಪೀಠ ವಿಚಾರಣೆ ನಡೆಸಿ ವೈದ್ಯರ ನಿರ್ಲಕ್ಷ ಸೇವಾ ನ್ಯೂನ್ಯತೆ ಸಾಬೀತಾದ ಹಿನ್ನೆಲೆ 10 ಲಕ್ಷ ರೂ.ಗಳನ್ನು ದೂರು ದಾಖಲಾದ ದಿನದಿಂದ ಶೇ.9ರಂತೆ ಸೇರಿಸಿ ಆರು ವಾರಗಳೊಳಗಾಗಿ ದೂರುದಾರರಿಗೆ ಪಾವತಿಸಿ, ಖರ್ಚೆಂದು 1 ಲಕ್ಷ ಸೇರಿ ಒಟ್ಟಾರೆ 11 ಲಕ್ಷ ರೂ.ಗಳನ್ನು ಮೋಹನ್ ಕುಮಾರ್ ಅವರಿಗೆ ನೀಡಬೇಕೆಂದು ಹಾಗೂ 50 ಸಾವಿರ ರೂ. ದಂಡವನ್ನು ವೈದ್ಯಕೀಯ ವರದಿಯಲ್ಲಿ ಕೆಟ್ಟ ಬರವಣಿಗೆಯಲ್ಲಿ ನಮೂದು ಮಾಡಿರುವ ಕಾರಣ ಗ್ರಾಹಕ ಸಂರಕ್ಷಣಾ ನಿಧಿಗೆ ಪಾವತಿಸುವಂತೆ, ತಪ್ಪಿದ್ದಲ್ಲಿ ಒಟ್ಟು ಮೊತ್ತದ ಮೇಲೆ ಸಾಲಿಯಾನ ಶೇ.10 ರಷ್ಟು ಬಡ್ಡಿಯೊಂದಿಗೆ ಡಾ.ಪುರುಷೋತ್ತಮ ಅವರು ಪಾವತಿಸಬೇಕೆಂದು ತೀರ್ಪು ನೀಡಲಾಗಿದೆ.