ಹೊಸದಿಗಂತ ವರದಿ,ಮಂಡ್ಯ:
ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್‌ಗಾಂಧಿಯನ್ನು ರಾವಣನಂತೆ ಬಿಂಬಿಸಿ ಪೋಸ್ಟರ್ ಬಿಡುಗಡೆ ಮಾಡಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ನಗರದ ಕಲ್ಲಹಳ್ಳಿಯ ಸುಮಾ ರವಿ ಕಲ್ಯಾಣ ಮಂಟಪದ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಬಗ್ಗೆ ಧರ್ಮವಿರೋಧಿತನದ ಪೋಸ್ಟರ್‌ಗಳನ್ನು ಬಳಸಿದ್ದಾರೆ ಎಂದು ಆರೋಪಿಸಿದರು.
ಪೋಸ್ಟರ್‌ನಲ್ಲಿ ರಾವಣ ಕಾಂಗ್ರೆಸ್ ಪಕ್ಷದ ನಿರ್ಮಾಣ, ಜಾರ್ಜ್ ಸೊರೊಸ್ ನಿರ್ದೇಶನ ಎಂದು ಬರೆದಿದೆ. ಅಲ್ಲದೇ ಚಿತ್ರದಲ್ಲಿ ರಾವಣನಂತೆಯೇ ರಾಹುಲ್ ಗಾಂಧಿಯವರಿಗೆ ಬಹು ತಲೆಗಳನ್ನು ಬಿಡಿಸಲಾಗಿದೆ. ಅಲ್ಲದೇ ರಾವಣನಂತೆ ರಕ್ಷಾಕವಚವನ್ನು ಧರಿಸಿರುವುದನ್ನು ತೋರಿಸಲಾಗಿದೆ. ಇದರ ಜೊತೆ ಹೊಸ ಯುಗದ ರಾವಣ ಬಂದಿದ್ದಾನೆ. ಅವನು ದುಷ್ಟ, ಧರ್ಮ ವಿರೋಧಿಯಾಗಿದ್ದಾನೆ. ಅಷ್ಟೇ ಅಲ್ಲದೆ ರಾಮನ ವಿರೋಧಿಯಾಗಿದ್ದು, ಅವನ ಗುರಿ ಭಾರತವನ್ನು ನಾಶಮಾಡುವುದು ಎಂದು ಬರೆದಿರುವುದನ್ನು ತೀವ್ರವಾಗಿ ವಿರೋಧಿಸಿದರು.
ಪ್ರತಿಭಟನೆಯಲ್ಲಿ ಶಾಸಕರುಗಳು, ಮಾಜಿ ಶಾಸಕರುಗಳು, ಕೆಪಿಸಿಸಿ ಪದಾಧಿಕಾರಿಗಳು, ಪಕ್ಷದ ಹಿರಿಯ ಮುಖಂಡರುಗಳು, ಮಹಿಳಾ ಸಮಿತಿ ಯುವ ಸಮಿತಿ ಸೇರಿದಂತೆ ಹಲವರು ಹಾಜರಿದ್ದರು.