ಹೊಸದಿಗಂತ ವರದಿ, ವಿಜಯಪುರ:
ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ಲಕ್ಷಾಂತರ ರೂ.ವಂಚಿಸಿದ ನೈಜಿರಿಯನ್ ಮೂಲದ ವ್ಯಕ್ತಿ ಸೇರಿದಂತೆ ನಾಲ್ವರು ಆನ್‌ಲೈನ್ ಕಳ್ಳರನ್ನು ಇಲ್ಲಿನ ಸಿಇಎನ್ ಠಾಣೆ ಇನ್ಸಪೆಕ್ಟರ್ ರಮೇಶ ಅವಜಿ ನೇತೃತ್ವದ ತಂಡ ಬಂಸಿದ್ದು, ಅವರಿಂದ ಮೊಬೈಲ್ ಹಾಗೂ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಧಾರವಾಡದ ಶಮಸುದ್ದಿನ್ ಅಸ್ಲಂ ಕುನಾಲ್ ಜಾರ್‌ಸಾಬ ಸಂಗ್ರೇಶಕೊಪ್ಪ, ಫಯಾಜ್‌ಅಹ್ಮದ್ ಫಯಾಜ್ ನಿಜಾಮುದ್ದಿನ್ ತಡಕೋಡ, ರುಬಿನ್ ದಶರಥ ಬಾಳೆ ಹಾಗೂ ಕೀನ್ಯಾ ದೇಶದ ಕ್ರಿಸ್ ಅನ್ಯುಗಾಬಾರಕೆ ಥಾಮಸ್ ಒಂಬೊಗಾ ಬಂಧಿತ ಆರೋಪಿಗಳು.
ವಿಜಯಪುರದ ಬಟ್ಟೆ ವರ್ತಕ ವಿಶಾಲ ಜೈನ್ ಎಂಬುವರು ಈ ಆರೋಪಿಗಳಿರುವ ವಾಟ್ಸ್‌ಆಪ್ ಗ್ರೂಪ್‌ನಲ್ಲಿ ಸೇರ್ಪಡೆಯಾಗಿದ್ದರು. ಕೆಲ ದಿನಗಳ ಕಾಲ ಸೂಕ್ಷ್ಮವಾಗಿ ಗಮನಿಸಿದ ಜೈನ್ ಕೊನೆಗೆ ತಾನೂ ೫೯ ಲಕ್ಷ ರೂ. ಹಣವನ್ನು ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿದರು. ಆದರೆ, ಹಣ ಮರಳಿ ಬರಲಿಲ್ಲ. ಇದರಿಂದಾಗಿ ವಿಚಲಿತನಾಗಿ ವಿಶಾಲ ಜೈನ್ ನಗರದ ಸಿಇಎನ್ ಠಾಣೆಗೆ ದೂರು ದಾಖಲಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಇಎನ್ ಠಾಣೆ ಇನ್ಸಪೆಕ್ಟರ್ ರಮೇಶ ಅವಜಿ ನೇತೃತ್ವದ ತಂಡ, ಚಾಣಾಕ್ಷತನದಿಂದ ಆರೋಪಿಗಳನ್ನು ಬಂಧಿಸಿದೆ ಎಂದು ಎಸ್ಪಿ ಋಷಿಕೇಶ ಭಗವಾನ್ ತಿಳಿಸಿದ್ದಾರೆ.
ಎಸ್ಪಿ ಋಷಿಕೇಶ ಭಗವಾನ್, ಅಡಿಷನಲ್ ಎಸ್ಪಿ ಶಂಕರ ಮಾರಿಹಾಳ ಸಮರ್ಥ ಮಾರ್ಗದರ್ಶನದಲ್ಲಿ ಈ ಆನ್‌ಲೈನ್ ಹೂಡಿಕೆಯ ಖದೀಮರನ್ನು ಬಂಸಿದ್ದಾಗಿ ಸಿಇಎನ್ ಠಾಣೆ ಇನ್ಸ್‌ಪೆಕ್ಟರ್ ರಮೇಶ ಅವಜಿ ತಿಳಿಸಿದ್ದಾರೆ.