Wednesday, November 29, 2023

Latest Posts

ಸ್ತ್ರೀ ವೇಷಧಾರಿ ಮೂರೂರು ವಿಷ್ಣು ಭಟ್ ನಿಧನ

ಹೊಸದಿಗಂತ ವರದಿ, ಸಿದ್ದಾಪುರ:

ಯಕ್ಷಗಾನದ ಖ್ಯಾತ ಸ್ತ್ರೀ ವೇಷಧಾರಿ ಮೂರೂರು ವಿಷ್ಣು ಭಟ್ (೬೫) ಅವರು ಭಾನುವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಅಭಿಮಾನಿಗಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೂಲತಃ ಕುಮಟಾ ತಾಲೂಕಿನ ಮೂರೂರಿನವರಾದ ಅವರು, ಸದ್ಯ ಸಿದ್ದಾಪುರ ತಾಲೂಕಿನ ಭಾನ್ನುಳಿಯಲ್ಲಿ ವಾಸವಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿಗೆ ಸಾಗಿಸುವ ವೇಳೆ ನಿಧನರಾಗಿದ್ದಾರೆ.

ಭಾಲ್ಕುಳಿಯಲ್ಲಿ ಅಭಿಮಾನಿಗಳು, ಹಿತೈಷಿಗಳ ಸಮ್ಮುಖದಲ್ಲಿ ವಿಷ್ಣು ಭಟ್ ಅವರ ಅಂತ್ಯಕ್ರಿಯೆ ನಡೆಯಿತು. ಮೂರೂರು ವಿಷ್ಣು ಭಟ್ ಅವರ ಸ್ತ್ರೀ ವೇಷಕ್ಕೆ ಎಲ್ಲಿಲ್ಲದ ಖ್ಯಾತಿ ಇತ್ತು. ಭೀಷ್ಮ ವಿಜಯದ ಅಂಬೆ, ಜಮದಗ್ನಿಯ ರೇಣುಕಾ, ದುಷ್ಟಬುದ್ದಿ ಆಖ್ಯಾನದ ವಿಷಯೆ, ರಾಮಾಜನೇಯದ ಸೀತೆ, ದಕ್ಷಯಜ್ಞದ ದಾಕ್ಷಾಯಣಿ, ಹರಿಶ್ಚಂದ್ರದ ಚಂದ್ರಮತಿ, ನಳಚರಿತ್ರೆಯ ದಮಯಂತಿ, ಸುಭದ್ರೆ, ಪ್ರಭಾವತಿ, ಇನ್ನೂ ಅನೇಕ ಪಾತ್ರಗಳಲ್ಲಿ ಛಾಪನ್ನು ಮೂಡಿಸಿದ್ದರು.

ಗುಂಡುಬಾಳ, ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ, ಶಿರಸಿ, ಪೆರ್ಡೂರು, ಮಂದಾರ್ತಿ, ಸಾಲಿಗ್ರಾಮ, ಪೂರ್ಣಚಂದ್ರ ಮೇಳಗಳಲ್ಲಿ ನಾಲ್ಕು ದಶಕಗಳ ಕಲಾ ಸೇವೆ ಗೈದಿದ್ದರು. ತಮ್ಮ ಭಾವಪೂರ್ಣ ಅಭಿನಯ, ಮಾತುಗಾರಿಕೆಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು.

ಯಕ್ಷಗಾನ ಕಲಾರಂಗ ಪ್ರಶಸ್ತಿ, ಪದಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆ, ಶಂಭು ಹೆಗಡೆ, ನಗರ ಜಗನ್ನಾಥ ಆಚಾರ್, ಕೊಂಡದಕುಳಿ ರಾಮಚಂದ್ರ ಹೆಗಡೆ, ಬಳಕೂರು ಕೃಷ್ಣಯಾಜಿ ಮುಂತಾದ ಹಿರಿಯ ಕಲಾವಿದರೊಂದಿಗೆ ಪಾತ್ರ ನಿರ್ವಹಿಸುತ್ತಿದ್ದರು.
ಕೇವಲ ಸ್ತ್ರೀ ಪಾತ್ರವಲ್ಲದೆ ಪೋಷಕ ಪಾತ್ರಗಳನ್ನು ತಮ್ಮದೇ ಆದ ಶೈಲಿಯಲ್ಲಿ ಪ್ರಸ್ತುತ ಪಡಿಸುವ ಮೂಲಕ ಹೆಸರುವಾಸಿಯಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!