ಹೊಸದಿಗಂತ ವರದಿ,ಮೈಸೂರು:
ಈ ಬಾರಿ ಸಾಂಪ್ರದಾಯಿಕವಾಗಿ ನಡೆಯಲಿರುವ ನಾಡ ಹಬ್ಬ ದಸರಾ ಮಹೋತ್ಸವದ ಕೊನೆ ದಿನ ನಡೆಯುವ ಜಂಬೂಸವಾರಿಯಲ್ಲಿ ಆಕರ್ಷಣೆಯಾದ 36 ಸ್ತಬ್ದ ಚಿತ್ರಗಳು ಭಾಗವಹಿಸಿ, ನಾಡಿನ ಇತಿಹಾಸ, ಪರಂಪರೆ, ಸಂಸ್ಕೃತಿ ಮುಂತಾದವುಗಳನ್ನು ಪ್ರದರ್ಶಿಸುವ ಮೂಲಕ ಲಕ್ಷಾಂತರ ಮಂದಿಯ ಕಣ್ಮನ ಸೆಳೆಯಲಿದೆ.
ಅ. 24ರ ವಿಜಯದಶಮಿಯಂದು ನಡೆಯುವ ಜಂಬೂಸವಾರಿ ಮೆರವಣಿಗೆ ಮೆರುಗು ನೀಡಲು 36 ಸ್ತಬ್ಧಚಿತ್ರಗಳು ಸಿದ್ದವಾಗಲಿವೆ. ರಾಜ್ಯದ 31 ಜಿಲ್ಲಾ ಪಂಚಾಯತಿಗಳು ಹಾಗೂ 5 ವಿವಿಧ ಇಲಾಖೆಯ ಸ್ತಬ್ಧಚಿತ್ರ ಸೇರಿ ಒಟ್ಟು 36 ಸ್ತಬ್ಧಚಿತ್ರಗಳು ಪ್ರದರ್ಶಗೊಳ್ಳಲಿವೆ.
ಪ್ರವಾಸಿಗರು, ಸಾರ್ವಜನಿಕರನ್ನು ಆಕರ್ಷಿಸಲು ಉತ್ತಮ ರೀತಿಯಲ್ಲಿ ಸ್ತಬ್ಧಚಿತ್ರ ತಯಾರು ಮಾಡಲು ಸೂಚಿಸಲಾಗಿದೆ. ಆಯಾಯ ಜಿಲ್ಲೆಯ ಪ್ರಾಕೃತಿಕ, ಭೌಗೋಳಿಕ ಹಾಗೂ ಐತಿಹಾಸಿಕ ವಿಶೇಷತೆಗಳನ್ನು ಒಳಗೊಂಡ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲು ತೀರ್ಮಾನಿಸಲಾಗಿದೆ.
ಅ. 10 ರಿಂದ ಸ್ತಬ್ದ ಚಿತ್ರಗಳ ತಯಾರಿ ಕಾರ್ಯ ಆರಂಭ
ಸ್ತಬ್ಧಚಿತ್ರ ಚಿತ್ರಗಳ ತಯಾರಿ ಕಾರ್ಯ ಅ. 10 ರಿಂದ ಮೈಸೂರಿನ ನಂಜನಗೂಡು ರಸ್ತೆಯ ಬಂಡಿಪಾಳ್ಯದ ಆವರಣದಲ್ಲಿ ಆರಂಭವಾಗಿದೆ.
ಎಲ್ಲ 31 ಜಿಲ್ಲಾ ಪಂಚಾಯತಿಗಳ ಸ್ತಬ್ದ ಚಿತ್ರ ತಯಾರಿಕೆ; ರಾಜ್ಯದ ಎಲ್ಲಾ 31 ಜಿಲ್ಲಾ ಪಂಚಾಯಿತಿಗಳಿoದ ಸ್ತಬ್ದ ಚಿತ್ರ ತಯಾರಿಕೆ ನಡೆಯಲಿದೆ. ಬಾಗಲಕೋಟೆ ಜಿಲ್ಲೆಯಿಂದ ಬಾದಾಮಿ ಚಾಲುಕ್ಯರು ಮತ್ತು ಬನಶಂಕರಿ ದೇವಿ ದೇವಸ್ಥಾನ, ಬಳ್ಳಾರಿಯಿಂದ ನಾರಿ ಹಳ್ಳ ಆಣೆಕಟ್ಟು, ಬೆಳಗಾವಿಯಿಂದ ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್ ಫಾಲ್ಸ್, ಬೆಂಗಳೂರಿನಿoದ ಚಂದ್ರಯಾನ 3, ಚಾಮರಾಜನಗರದಿಂದ ಜಾನಪದ ಭಕ್ತಿಯ ಬೀಡು, ಆನೆ-ಹುಲಿಗಳ ಸಂತೃಪ್ತಿಯ ಕಾಡು, ಮಂಡ್ಯದಿoದ ಸಾಂಪ್ರದಾಯಿಕ ಆಲೆಮನೆ, ಬೀದರ್‌ನಿಂದ ಕೃಷ್ಣಮೃಗ ಸಂರಕ್ಷಣಾಧಾಮ, ರಾಯಚೂರಿನಿಂದ ನವರಂಗ ದರ್ವಾಜ, ದಾಸರ ಮಂಟಪ ಮತ್ತು ಕಲ್ಲಿದ್ದಲು ವಿದ್ಯುತ್ ಸ್ಥಾವರ, ಹಾವೇರಿಯಿಂದ ಶಂಖನಾದ ಮೊಳಗಿಸುತ್ತಿರುವ ಕನಕದಾಸರು ಮತ್ತು ಕಾಗಿನೆಲೆ, ರಾಮನಗರದಿಂದ ಚನ್ನಪಟ್ಟಣದ ಬೊಂಬೆಗಳು, ಶಿವಮೊಗ್ಗದಿಂದ ಕುವೆಂಪು ಗುಡವಿ ಪಕ್ಷಿಧಾಮ, ಕೆಳದಿ ಶಿವಪ್ಪ ನಾಯಕ, ತುಮಕೂರಿನಿಂದ ಮೂಡಲಪಾಯ ಯಕ್ಷಗಾನ ಹಾಗೂ ವಾಸ್ತುಶಿಲ್ಪ ಮತ್ತು ಉಡುಪಿಯಿಂದ ತ್ಯಾಜ್ಯ ಮುಕ್ತ ಮತ್ಯ ಸ್ನೇಹಿ ಸಮುದ್ರ, ವಿಜಯನಗರದಿಂದ ವಿಜಯವಿಠಲ ದೇವಾಲಯ ಸೇರಿದಂತೆ ಸ್ತಬ್ಧಚಿತ್ರಗಳು ಸಿದ್ಧವಾಗಲಿವೆ.
ಅಲ್ಲದೇ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ, ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಮತ್ತು ಸಮಾಜ ಕಲ್ಯಾಣ ಇಲಾಖೆ ಗಳ ಸ್ತಬ್ಧಚಿತ್ರಳು ನಿರ್ಮಾಣವಾಗಲಿದೆ. ಇದೇ ಮೊದಲ ಬಾರಿಗೆ ಮೈಸೂರು ವೈದ್ಯಕೀಯ ಕಾಲೇಜಿನ ಸ್ತಬ್ಧಚಿತ್ರ ದಸರೆಯಲ್ಲಿ ಪಾಲ್ಗೊಳ್ಳಲಿದೆ. ಮೈಸೂರು ವೈದ್ಯಕೀಯ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಲೇಜಿನ ಐತಿಹಾಸಿಕ ಹಿನ್ನೆಲೆ, ಭೂತ ವರ್ತಮಾನ ಮತ್ತು ಭವಿಷ್ಯದ ಚಿತ್ರಣವನ್ನು ಹೊಂದಿರುವ ಸ್ತಬ್ಧಚಿತ್ರವನ್ನು ಪ್ರದರ್ಶಿಸಲು ತೀರ್ಮಾನಿಸಲಾಗಿದೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಸರ್ಕಾರದ ಗೃಹಜ್ಯೋತಿ ಯೋಜನೆ ಮಾಹಿತಿ ಒಳಗೊಂಡ ಸ್ತಬ್ಧಚಿತ್ರ ಇರಲಿದೆ. ಇದರಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ ಬಳಕೆ ಮಾಡುವ ವಿಧಾನವನ್ನು ಪರಿಚಯಿಸುತ್ತಿರುವುದು ವಿಶೇಷ.
ಕೆಎಂಫ್‌ನಿoದ ಕ್ಷೀರ ಭಾಗ್ಯ ಯೋಜನೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕರ್ನಾಟಕ ಪುಣ್ಯಕೋಟಿ ದತ್ತು ಯೋಜನೆ ಬಿಂಬಿಸುವ ಸ್ತಬ್ಧಚಿತ್ರ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತನ್ನ ವಿವಿಧ ಯೋಜನೆಗಳ ಮಾಹಿತಿ ಒಳ ಗೊಂಡ ಸ್ತಬ್ಧಚಿತ್ರಗಳನ್ನು ಆಕರ್ಷಕವಾಗಿ ನಿರ್ಮಿಸಲಾಗುತ್ತಿದೆ.