ಹೊಸದಿಗಂತ ವರದಿ ಬೆಳಗಾವಿ:
ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಲೇ ಇವೆ. ಜಿಲ್ಲಾಧಿಕಾರಿಗಳು ದಂಡವನ್ನೂ ವಿಧಿಸಿದ್ದಾಗಿದೆ. ಮೊನ್ನೆ ನಡೆದ ಪಾಲಿಕೆ ಸಭೆಯಲ್ಲಿಯೂ ಈ ವಿಚಾರ ಪ್ರತಿಧ್ವನಿಸಿದೆ.
ಆದರೆ, ಮಂಗಳವಾರ ಮಾತ್ರ ಅದ್ಯಾಕೋ ನಗರದ ಜನತೆ ಆಕ್ರೋಶದ ಕಟ್ಟೆ ಒಡೆದಿತ್ತು. ಪಕ್ಷಭೇದ ಮರೆತು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಅಷ್ಟೇ ಏಕೆ, ಮಹಿಳೆಯರಂತೂ ಮಣ್ಣು, ಜಲ್ಲಿಕಲ್ಲುಗಳನ್ನು ಬುಟ್ಟಿಗಳಲ್ಲಿ ತುಂಬಿಕೊಂಡು ನಡುರಸ್ತೆಯಲ್ಲಿಯೇ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಬೆಳಗಾವಿ ನಾಗರಿಕರ ಹಿತರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ಇಲ್ಲಿನ ಛತ್ರಪತಿ ಶಿವಾಜಿ ಗಾರ್ಡ್ ನ ಬಳಿ ನಡೆದ ಈ ಪ್ರತಿಭಟನೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಸಂಪೂರ್ಣ ಕಳಪೆ ಮತ್ತು ಅವೈಜ್ಞಾನಿಕವಾಗಿವೆ. ಮೂಲ ಗುತ್ತಿಗೆದಾರರು ಇಲ್ಲದೇ ಬಹುತೇಕ ಕಾಮಗಾರಿಗಳನ್ನು ಉಪಗುತ್ತಿಗೆದಾರರೇ ಮಾಡುತ್ತಿದ್ದು, ಎಲ್ಲ ಕಾಮಗಾರಿಗಳು ಗುಣಮಟ್ಟ ಕಳೆದುಕೊಂಡಿವೆ ಎಂದು ಆಕ್ರೋಶ ಹೊರಹಾಕಿದರು.
ಪ್ರತಿಭಟನಾ ಮೆರವಣಿಗೆ ನಡೆಸಿದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಿಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು. ಸಮಾಜ ಸೇವಕ ಸುಜೀತ್ ಮುಳಗುಂದ, ಆಮ್ ಆದ್ಮಿ ಪಕ್ಷದ ಮುಖಂಡ ರಾಜೀವ ಟೋಪಣ್ಣವರ ಮತ್ತಿತರರು ಮಾತನಾಡಿದರು.
ಕೆಪಿಸಿಸಿ ಕಾರ್ಯದಶಿ ಸುನೀಲ್ ಹಣಮನ್ನವರ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ, ಅಜೀಂ ಪಟೇಗಾರ್, ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಮಾಕಾಂತ ಕುಂಡೋಸ್ಕರ್, ಪ್ರತಿಭಾ ಪಾಟೀಲ, ಆಯಿಶಾ ಸನದಿ, ಎನ್.ಆರ್.ಲಾತೂರ್, ಪರಶುಆಮ್ ಢಗೆ, ಸರಳಾ ಸಾತ್ಪುತೆ, ಸರಿತಾ ಪಾಟೀಲ, ರೇಣು ಕಿಲ್ಲೇಕರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.