ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ಹಂಚಿಕೆಯ ಕುರಿತಾದ ಶೀತಲ ಸಮರ ಈಗ ದೆಹಲಿಯ ಅಂಗಳ ತಲುಪಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ರಾಜಕೀಯ ಜಿದ್ದಾಜಿದ್ದಿ ಹೊಸ ಮಜಲು ತಲುಪಿದ್ದು, ಹೈಕಮಾಂಡ್ ನಡೆ ಈಗ ಕುತೂಹಲ ಮೂಡಿಸಿದೆ.
ಡಿಸೆಂಬರ್ 27ರಂದು ದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ನಾಳೆ ಅವರು ದೆಹಲಿಗೆ ತೆರಳಲಿದ್ದಾರೆ.
ಇತ್ತೀಚೆಗಷ್ಟೇ ದೆಹಲಿಗೆ ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಹುಲ್ ಗಾಂಧಿ ಅವರ ಭೇಟಿಗೆ ಪ್ರಯತ್ನಿಸಿ ವಿಫಲರಾಗಿದ್ದಾರೆ. ಹೈಕಮಾಂಡ್ ಭೇಟಿ ಸಾಧ್ಯವಾಗದ ಹಿನ್ನೆಲೆ ಅವರು ವಾಪಸ್ ಬೆಂಗಳೂರಿಗೆ ಮರಳಿದ್ದಾರೆ.
ದೆಹಲಿ ಭೇಟಿ ವಿಫಲವಾದ ಬೆನ್ನಲ್ಲೇ, ಬೆಂಗಳೂರಿನಲ್ಲಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಡಿಕೆಶಿ ಮಹತ್ವದ ಚರ್ಚೆ ನಡೆಸಿದ್ದಾರೆ.
“ಸಿಡಬ್ಲ್ಯುಸಿ ಸಭೆಗೆ ನನ್ನನ್ನು ಕರೆದಿಲ್ಲ, ಕರೆದರೆ ಹೋಗುತ್ತೇನೆ. ಸಿಎಂ ಹೋಗುತ್ತಿದ್ದಾರೆ ಎಂಬ ಮಾಹಿತಿ ಇದೆ” ಎಂದು ಹೇಳುವ ಮೂಲಕ ಡಿಕೆಶಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

