Thursday, December 25, 2025

ವೇಗದ ಪಯಣಕ್ಕೆ ‘ಬೈಪಾಸ್’ ಬಲ: ಬೆಂಗಳೂರು-ವಿಜಯಪುರ ರೈಲು ಪ್ರಯಾಣ ಇನ್ಮುಂದೆ ಮತ್ತಷ್ಟು ಸುಲಭ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ರಜಾ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ನೈರುತ್ಯ ರೈಲ್ವೆಯು ಬೆಂಗಳೂರಿನಿಂದ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮೂಲಕ ವಿಜಯಪುರಕ್ಕೆ ವಿಶೇಷ ರೈಲನ್ನು ಓಡಿಸುತ್ತಿದೆ. ಈ ಐತಿಹಾಸಿಕ ಬದಲಾವಣೆಯನ್ನು ಸ್ವಾಗತಿಸಿರುವ ಸಚಿವ ಎಂ.ಬಿ. ಪಾಟೀಲ್, ಈ ಸೇವೆಯನ್ನು ಕಾಯಂಗೊಳಿಸಬೇಕು ಎಂದು ರೈಲ್ವೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಸಾಮಾನ್ಯವಾಗಿ ರೈಲುಗಳು ಹುಬ್ಬಳ್ಳಿ ಮತ್ತು ಗದಗ್ ನಿಲ್ದಾಣಗಳಿಗೆ ಪ್ರವೇಶಿಸಿದಾಗ ಎಂಜಿನ್ ದಿಕ್ಕು ಬದಲಿಸಬೇಕಾಗುತ್ತದೆ, ಇದರಿಂದ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಆದರೆ ಈಗ ಪ್ರಾಯೋಗಿಕವಾಗಿ ಓಡಿಸಲಾದ ವಿಶೇಷ ರೈಲು ಈ ಎರಡೂ ನಿಲ್ದಾಣಗಳ ‘ಬೈಪಾಸ್’ ಮೂಲಕ ಸಂಚರಿಸಿದೆ. ಇದರಿಂದ ಎಂಜಿನ್ ಬದಲಿಸುವ ಕಿರಿಕಿರಿ ತಪ್ಪಿದ್ದು, ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಿದೆ ಎಂಬುದು ಸಚಿವರ ಅಭಿಮತ.

ಬೆಂಗಳೂರು ಮತ್ತು ವಿಜಯಪುರ ನಡುವಿನ ಸದ್ಯದ ಪ್ರಯಾಣದ ಅವಧಿ ಸುಮಾರು 14 ಗಂಟೆಗಳು. ಇದನ್ನು 10 ಗಂಟೆಗಳಿಗೆ ಇಳಿಸುವ ನಿಟ್ಟಿನಲ್ಲಿ ಸಚಿವರು ಕಾರ್ಯಪ್ರವೃತ್ತರಾಗಿದ್ದಾರೆ. “ಮೈಸೂರು-ಪಂಡರಪುರ ಗೋಲಗುಂಬಜ್ ಎಕ್ಸ್‌ಪ್ರೆಸ್‌ ಸೇರಿದಂತೆ ವಿಜಯಪುರಕ್ಕೆ ಸಂಚರಿಸುವ ಎಲ್ಲಾ ರೈಲುಗಳನ್ನು ಬೈಪಾಸ್ ಮೂಲಕವೇ ಓಡಿಸಿದರೆ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ನಮ್ಮ ಪ್ರಯತ್ನಕ್ಕೆ ಮೊದಲ ಯಶಸ್ಸು ಸಿಕ್ಕಿದೆ” ಎಂದು ಅವರು ತಿಳಿಸಿದ್ದಾರೆ.

ಈ ವಿಶೇಷ ರೈಲು ಸೇವೆಯನ್ನು ಕಾಯಂಗೊಳಿಸಲು ಹಾಗೂ ವೇಳಾಪಟ್ಟಿಯಲ್ಲಿ ಬದಲಾವಣೆ ತರಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆಯುವುದಾಗಿ ಪಾಟೀಲರು ಹೇಳಿದ್ದಾರೆ. ಬೆಂಗಳೂರಿನಿಂದ ರಾತ್ರಿ ಹೊರಡುವ ರೈಲುಗಳು ಬೆಳಿಗ್ಗೆ 6 ರಿಂದ 7 ಗಂಟೆಯೊಳಗೆ ವಿಜಯಪುರ ತಲುಪುವಂತಾದರೆ ವಾಣಿಜ್ಯ ಮತ್ತು ಪ್ರವಾಸೋದ್ಯಮ ದೃಷ್ಟಿಯಿಂದ ಅತ್ಯಂತ ಸಹಕಾರಿಯಾಗಲಿದೆ ಎಂಬುದು ಅವರ ಪ್ರತಿಪಾದನೆ.

ಕೇವಲ ಒಂಬತ್ತು ನಿಲುಗಡೆಗಳನ್ನು ಹೊಂದಿರುವ ಈ ವಿಶೇಷ ರೈಲು ಸಂಚಾರಕ್ಕೆ ವಿಜಯಪುರ ಜಿಲ್ಲೆಯ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷ ರೈಲುಗಳು ಭವಿಷ್ಯದಲ್ಲಿ ಕಾಯಂ ಸೇವೆಯಾಗಿ ಬದಲಾಗುವ ಸಾಧ್ಯತೆಗಳಿರುವುದರಿಂದ, ಈ ಮಾರ್ಗವು ಉತ್ತರ ಕರ್ನಾಟಕದ ರೈಲು ಸಂಚಾರ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂದು ನಿರೀಕ್ಷಿಸಲಾಗಿದೆ.

error: Content is protected !!