ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ‘ಮುಖ್ಯಮಂತ್ರಿ ಬದಲಾವಣೆ’ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಿದ್ದ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು, ಈಗ ಅಚ್ಚರಿಯ ಮೌನಕ್ಕೆ ಶರಣಾಗಿದ್ದಾರೆ. ಈ ಹಿಂದೆ “ಐದು ವರ್ಷ ನಮ್ಮಪ್ಪನೇ ಸಿಎಂ” ಎಂದು ಗುಡುಗಿದ್ದ ಯತೀಂದ್ರ, ಈಗ ಅದೇ ಪ್ರಶ್ನೆ ಎದುರಾದಾಗ ಅತ್ಯಂತ ಜಾಗರೂಕತೆಯಿಂದ ಹೆಜ್ಜೆ ಇಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕವಲಗುಡ್ಡದಲ್ಲಿ ನಡೆದ ಖಾಸಗಿ ಶಾಲೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಯತೀಂದ್ರ ಅವರಿಗೆ ಮಾಧ್ಯಮದವರು ಸಿಎಂ ಬದಲಾವಣೆ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಅವರು, “ಸಿಎಂ ಬದಲಾವಣೆ ಬಗ್ಗೆ ಈಗಾಗಲೇ ಸಾಕಷ್ಟು ಮಾತನಾಡಿದ್ದೇನೆ, ಸ್ವತಃ ಮುಖ್ಯಮಂತ್ರಿಗಳೇ ಸ್ಪಷ್ಟನೆ ನೀಡಿದ್ದಾರೆ. ಈಗ ಈ ಬಗ್ಗೆ ಮಾತನಾಡುವುದು ಸರಿಯಲ್ಲ” ಎನ್ನುವ ಮೂಲಕ ಯಾವುದೇ ಹೊಸ ವಿವಾದಕ್ಕೆ ಎಡೆಮಾಡಿಕೊಡದೆ ಅಂತರ ಕಾಯ್ದುಕೊಂಡರು.
ಕಳೆದ ಬಾರಿ ಯತೀಂದ್ರ ನೀಡಿದ್ದ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದವು. ಇದು ಸಿಎಂ ಸಿದ್ದರಾಮಯ್ಯ ಅವರಿಗೂ ಮುಜುಗರ ತಂದಿತ್ತು. ಹೈಕಮಾಂಡ್ ಸೂಚನೆಯ ಮೇರೆಗೆ ತಂದೆ ಸಿದ್ದರಾಮಯ್ಯ ಅವರೇ ಪುತ್ರನಿಗೆ ರಾಜಕೀಯ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನ ಅವರ ಮಿತಭಾಷಿಯ ನಡೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ “ಸಾಮಾನ್ಯ ಕಾರ್ಯಕರ್ತ” ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಯತೀಂದ್ರ, “ಅಧಿಕಾರ ಎಂಬುದು ಬರುತ್ತದೆ, ಹೋಗುತ್ತದೆ. ಅದು ಯಾರೂ ಕೂಡ ಶಾಶ್ವತವಾಗಿ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಅದು ಸಿಎಂ ಇರಲಿ, ಡಿಸಿಎಂ ಇರಲಿ ಅಥವಾ ಸಚಿವರೇ ಇರಲಿ; ಅಧಿಕಾರಕ್ಕಿಂತ ಪಕ್ಷ ಕಟ್ಟುವ ಕೆಲಸ ಮುಖ್ಯ” ಎಂದು ಮಾರ್ಮಿಕವಾಗಿ ನುಡಿದರು.
ಯತೀಂದ್ರ ಅವರ ಈ “ಅಧಿಕಾರ ಮೋಹ”ದ ಕುರಿತಾದ ಕಿವಿಮಾತು ಈಗ ಪರೋಕ್ಷವಾಗಿ ಯಾರಿಗೆ ತಲುಪಿದೆ ಎಂಬ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ಆರಂಭವಾಗಿವೆ.

