ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಮೈಸೂರಿನಲ್ಲಿ ನಾಡಹಬ್ಬ ದಸರಾ ಉತ್ಸವ ಸಂಭ್ರಮ ಕಳೆಕಟ್ಟಿದ್ದು, ನಾದಬ್ರಹ್ಮ ಹಂಸಲೇಖ ದಸರಾ ಉದ್ಘಾಟನೆ ಮಾಡಲಿದ್ದಾರೆ. ಒಂಬತ್ತು ದಿನಗಳಕ್ಕೆ ಉತ್ಸವಕ್ಕೆ ಮೈಸೂರು ಸಾಕ್ಷಿಯಾಗಲಿದೆ. ಈಗಾಗಲೇ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ಬೆಳಗಿನ ಜಾವದಿಂದಲೇ ಅರಮನೆಯಲ್ಲಿ ಪೂಜೆ, ಹೋಮ ಹವನ ಪ್ರಾರಂಭವಾಗಿವೆ.
ಇಂದು ಬೆಳಿಗ್ಗೆ 6 ಗಂಟೆಯಿಂದ 6.25ರ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆಯಾಗಲಿದೆ. ಬಳಿಕ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಕಂಕಣಧಾರಣೆ, ಅರಮನೆ ಗೋಶಾಲೆಗೆ ಪಟ್ಟದ ಆನೆ ಪಟ್ಟದ ಕುದುರೆ ಬರಲಿವೆ. 10.15ರಿಂದ ಕಳಸ ಪೂಜೆ, ಸಿಂಹಾಸನ ಪೂಜೆ ನಡೆಯಲಿದ್ದು, ರಾಜ ಯದುವೀರ್ ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
ಇತ್ತ ಚಾಮುಂಡಿಬೆಟ್ಟದಲ್ಲಿ 10.15ರಿಂದ 10.36ರ ಶುಭ ವೃಶ್ಚಿಕ ಲಗ್ನದಲ್ಲಿ ಸಂಗೀತ ಮಾಂತ್ರಿಕ ಹಂಸಲೇಖ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಇಂದು ಸಂಜೆಯಿಂದ ವಿದ್ಯುತ್ ದೀಪಲಂಕಾರದಿಂದ ಮೈಸೂರು ಬೆಳಗಲಿದೆ.