Friday, December 26, 2025

ವಾಹನಗಳ ಹೊಗೆಯ ಸುಳಿಯಲ್ಲಿ ಬೆಂಗಳೂರು: WHO ಮಿತಿಗಿಂತ 5 ಪಟ್ಟು ಹೆಚ್ಚು ಮಾಲಿನ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲೇ ಈ ಬಾರಿ ವಾಯು ಮಾಲಿನ್ಯದ ಪ್ರಮಾಣ ಅತ್ಯಂತ ಕಳಪೆ ಮಟ್ಟಕ್ಕೆ ತಲುಪಿದೆ. ನಗರದ ವಾಯು ಗುಣಮಟ್ಟ ಸೂಚ್ಯಂಕ ಇಂದು 165 ದಾಖಲಾಗಿದ್ದು, ಇದು ಆರೋಗ್ಯವಂತ ಮನುಷ್ಯನಿಗೂ ಅಪಾಯಕಾರಿಯಾದ ಮಟ್ಟವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ AQI 50ಕ್ಕಿಂತ ಕಡಿಮೆ ಇರಬೇಕು, ಆದರೆ ಬೆಂಗಳೂರಿನಲ್ಲಿ ಇದು ಮೂರು ಪಟ್ಟು ಹೆಚ್ಚಿದೆ.

ನಗರದ ಗಾಳಿಯಲ್ಲಿ ಅತಿ ಸೂಕ್ಷ್ಮ ಕಣಗಳಾದ PM2.5 ಪ್ರಮಾಣ 82 µg/m³ ಮತ್ತು PM10 ಪ್ರಮಾಣ 119 µg/m³ ನಷ್ಟಿದೆ. ಇವು WHO ನಿಗದಿಪಡಿಸಿದ ಸುರಕ್ಷಿತ ಮಿತಿಗಿಂತ ಬರೋಬ್ಬರಿ 5 ಪಟ್ಟು ಹೆಚ್ಚಿವೆ.

ಇದು ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣ. ಇದು ನೇರವಾಗಿ ಶ್ವಾಸಕೋಶದ ಮೂಲಕ ರಕ್ತವನ್ನು ಸೇರುವ ಸಾಮರ್ಥ್ಯ ಹೊಂದಿದೆ.

ಬೆಂಗಳೂರಿನ ರಸ್ತೆಗಿಳಿಯುವ ಸುಮಾರು 1.2 ಕೋಟಿ ವಾಹನಗಳೇ ಈ ವಿಷಕಾರಿ ಗಾಳಿಗೆ 42% ರಷ್ಟು ಕೊಡುಗೆ ನೀಡುತ್ತಿವೆ. ಅದರಲ್ಲೂ ಸಂಚಾರ ದಟ್ಟಣೆ ಹೆಚ್ಚಿರುವ ಸಿಲ್ಕ್ ಬೋರ್ಡ್ ಮತ್ತು ವೈಟ್‌ಫೀಲ್ಡ್ ಅಂತಹ ಭಾಗಗಳಲ್ಲಿ ಮಾಲಿನ್ಯದ ಮಟ್ಟ ನಗರದ ಸರಾಸರಿಗಿಂತಲೂ 30% ಹೆಚ್ಚಿರುವುದು ಆತಂಕ ಮೂಡಿಸಿದೆ.

AQI 150 ದಾಟಿದಾಗ ಕೇವಲ ಅಸ್ತಮಾ ಅಥವಾ ಉಸಿರಾಟದ ತೊಂದರೆ ಮಾತ್ರವಲ್ಲದೆ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯವಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಮತ್ತು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.

error: Content is protected !!