ಹೊಸ ದಿಗಂತ ವರದಿ, ಕಲಬುರಗಿ:
ಸಮಾಜದ ಮಧ್ಯೆಯಲ್ಲಿರುವ ಜನರಿಗೆ ವೈಚಾರಿಕ ವಿಚಾರಗಳನ್ನು ತಲುಪಿಸಲೆಂದೆ 1948 ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನ್ಮ ತಾಳಿದ ವಿಕ್ರಮ ಪತ್ರಿಕೆಯೂ ಇಂದಿಗೂ ಸಹ ತನ್ನ ಬದ್ದತೆಯೊಂದಿಗೆ ರಾಷ್ಟ್ರೀಯ ವಿಚಾರ ಧಾರೆಗಳನ್ನು ಸಮಾಜಕ್ಕೆ ತಲುಪಿಸುವಂತಹ ಸೇವೆಯನ್ನು ನಿರಂತರವಾಗಿ 7 ದಶಕಗಳಿಂದ ಮಾಡುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರಿಯ ಸಹ ಕಾರ್ಯದರ್ಶಿ ಗೋಪಾಲ ತಿಳಿಸಿದರು.
ನಗರದ ಖಮೀತ್ಕರ್ ಭವನದಲ್ಲಿ ವಿಕ್ರಮ ಪತ್ರಿಕೆಯಿಂದ ಆಯೋಜಿಸಿದ್ದ ‘ಕರುನಾಡ ಶಿಖರ ಕಲ್ಯಾಣ ಕರ್ನಾಟಕ’ ಕಾಫಿ ಟೇಬಲ್ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಮಹಾತ್ಮಾ ಗಾಂಧಿ ಅವರ ಹತ್ಯೆಯ ಆರೋಪವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ಹೇರಿ ಸಂಘವನ್ನು ನಿಷೇಧಿಸಲಾಗಿತ್ತು. ಹೀಗಾಗಿ ಅಂದಿನಿಂದ ಜನರಿಗೆ ರಾಷ್ಟ್ರೀಯ ವಿಚಾರ ತಲುಪಿಸುವ ನಿಟ್ಟಿನಲ್ಲಿ ವಿಕ್ರಮ ಪತ್ರಿಕೆ ಪ್ರಾರಂಭವಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಶರಣಬಸವೇಶ್ವರ ವಿದ್ಯಾವರ್ದಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಡಾ. ದಾಕ್ಷಾಯಿಣಿ ಮಾತನಾಡಿ, ಇಡೀ ವಿಶ್ವದಲ್ಲಿ ಚಂದ್ರಯಾನ 3ರ ಭಾಗವಾದ ವಿಕ್ರಮ ಲ್ಯಾಂಡರ್ ಯಾವ ರೀತಿ ಸಾಧನೆ ಮಾಡಿತ್ತೋ, ಅದೇ ದಾರಿಯಲ್ಲಿ ವಿಕ್ರಮ ಪತ್ರಿಕೆಯೂ ಸಹ ಸಾಧನೆಯ ಮೈಲಿಗಲ್ಲಿನ ಹಂತಕ್ಕೆ ತಲುಪಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಸಂಘಚಾಲಕ ಖಗೇಶನ್ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿ ಜಿಲ್ಲಾ ಸಂಘಚಾಲಕ ಅಶೋಕ ಪಾಟೀಲ, ಪ್ರಾಂತ ಬೌದ್ಧಿಕ ಪ್ರಮುಖ ಕೃಷ್ಣ ಜೋಶಿ, ಪ್ರಾಂತ ಪ್ರಚಾರ ಪ್ರಮುಖ ಗೋಪಿ, ವಿಭಾಗ ಪ್ರಚಾರಕ ವಿಜಯ ಮಹಾಂತೇಶ, ವಿಕ್ರಮದ ಗೌರವ ಸಂಪಾದಕ ನ.ನಾಗರಾಜ , ವ್ಯವಸ್ಥಾಪಕ ಸಂಪಾದಕ ಸು.ನಾಗರಾಜ, ಸಂಪಾದಕ ರಮೇಶ ದೊಡ್ಡಾಪುರ, ವ್ಯವಸ್ಥಾಪಕ ಸತೀಶ್ ಆಚಾರ್ಯ, ದಿವ್ಯ ಹೆಗ್ಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.