ಹೊಸ ದಿಗಂತ ವರದಿ, ಮಡಿಕೇರಿ:
ಮಡಿಕೇರಿ ದಸರಾ ಜನೋತ್ಸವದಲ್ಲಿ ಡಿಜೆ ಬಳಸುವ ಸಂದರ್ಭ ಸುಪ್ರೀಂಕೋರ್ಟ್ ಸೂಚಿಸಿರುವ ನಿಯಮವನ್ನು ಪಾಲಿಸದಿದ್ದಲ್ಲಿ ಜಿಲ್ಲಾಡಳಿತದ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವುದಾಗಿ ವಕೀಲರು ಹಾಗೂ ಸಮಾಜಿಕ ಹೋರಾಟಗಾರರಾದ ಅಮೃತೇಶ್ ಎನ್.ಪಿ. ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ವಾಯ್ಸ್ ಆಫ್ ಪಬ್ಲಿಕ್ ಮೂಲಕ ಸುದ್ದಿಗೋಷ್ಠಿ ನಡೆಸಿದ ಅವರು, ಡಿಜೆ ಶಬ್ಧದಿಂದ ಪ್ರಾಣಕ್ಕೆ ಕುತ್ತು ಬರಲಿದೆ ಮತ್ತು ಲೇಸರ್ ಬೆಳಕಿನಿಂದ ಕಣ್ಣಿಗೆ ಹಾನಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ 10 ವರ್ಷಗಳಿಂದ ವಿವಿಧ ಸಂಘಟನೆಗಳು ದಸರಾದಲ್ಲಿ ಡಿಜೆ ಬಳಕೆ ವಿರುದ್ಧ ಆಕ್ಷೇಪ ಸಲ್ಲಿಸುತ್ತಾ ಬಂದಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಈ ಬಾರಿ ನಡೆಯುವ ಮಡಿಕೇರಿ ದಸರಾವನ್ನು ಚಿತ್ರೀಕರಿಸಿ ನ್ಯಾಯಾಲಯಕ್ಕೆ ನೀಡಲಾಗುವುದು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪರಿಸರ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಶಮಂಟಪ ಸಮಿತಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲಾಗುವುದು ಎಂದರು.
ಡಿಜೆಯನ್ನು ಸಂಪೂರ್ಣ ನಿಷೇಧ ಮಾಡಿ ಎಂದು ನಾವು ಹೇಳುತ್ತಿಲ್ಲ. ಬದಲಿಗೆ ನಿಯಮಾನುಸಾರ ಶಬ್ಧದ ಮಿತಿ ಇರಲಿ. ಅಬ್ಬರದ ಶಬ್ಧದಿಂದ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ, ಗಾಜುಗಳು ಒಡೆದು ಹೋಗಿವೆ. ಈ ನಷ್ಟವನ್ನು ಯಾರು ಭರಿಸುತ್ತಾರೆ, ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಇತ್ತೀಚೆಗೆ ಪುಣೆಯಲ್ಲಿ ಗಣೇಶ ವಿಸರ್ಜನೆ ಸಂದರ್ಭ ಅಬ್ಬರದ ಡಿಜೆ ಬಳಸಿ 2-3 ಸಾವುಗಳು ಸಂಭವಿಸಿವೆ. ಲೇಸರ್ ಬೆಳಕಿನ ಬಳಕೆಯಿಂದ ಸುಮಾರು 25 ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ. ಡಿಜೆ ಶಬ್ಧ ಹಿರಿಯ ನಾಗರಿಕರು, ಹೃದಯ ಸಂಬಂಧಿ ರೋಗಿಗಳು, ಗರ್ಭಿಣಿಯರು, ಮಕ್ಕಳು ಹಾಗೂ ಮೂಕ ಪ್ರಾಣಿಗಳ ಸಾವಿಗೆ ಕಾರಣವಾಗುತ್ತಿದೆ. ಇದನ್ನು ನಿಯಂತ್ರಿಸಲು ಜಿಲ್ಲಾಡಳಿತ ವಿಫಲವಾದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸಲು ನಾವು ಸಿದ್ಧರಿದ್ದೇವೆ ಎಂದು ಅಮೃತೇಶ್ ತಿಳಿಸಿದರು.
ಮೋಜು ಮಸ್ತಿಯ ದಸರಾ: ದಸರಾ ಹಬ್ಬದ ಮೂಲಕ ಯುವಜನತೆಗೆ ನಮ್ಮ ಆಚಾರ, ವಿಚಾರ, ಸಂಸ್ಕೃತಿಯನ್ನು ಪರಿಚಯಿಸಬೇಕಾಗಿತ್ತು. ಆದರೆ ಇಂದು ಡಿಜೆ ಹಾಕಿ, ಮದ್ಯಪಾನ ಮಾಡಿ ನರ್ತಿಸುವುದು ಮತ್ತು ಮೋಜು ಮಸ್ತಿಗಷ್ಟೇ ದಸರಾ ಸೀಮಿತವಾಗುತ್ತಿದೆ. ಮಂಟಪ ಸಮಿತಿಗಳು ಸರ್ಕಾರದ ಅನುದಾನವನ್ನೂ ಪಡೆಯುತ್ತವೆ. ಜೊತೆಯಲ್ಲಿ ಜನರಿಂದ ದೇಣಿಗೆಯನ್ನೂ ಸಂಗ್ರಹಿಸುತ್ತವೆ. ಆದರೆ ಜನರಿಗಾಗಿ ಮಂಟಪದಲ್ಲಿ ಯಾವುದೇ ದೃಶ್ಯವನ್ನು ತೋರಿಸದೆ ಕೇವಲ ತೀರ್ಪುಗಾರರಿಗೆ ಸೀಮಿತಗೊಳಿಸುತ್ತಿವೆ. ಸರಕಾರದ ಅನುದಾನ ಪಡೆಯುವ ಮಂಟಪ ಸಮಿತಿಗಳು ಲೆಕ್ಕಪತ್ರವನ್ನು ಕೂಡಾ ಮಂಡಿಸುತ್ತಿಲ್ಲವೆಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ವಾಯ್ಸ್ ಆಫ್ ಪಬ್ಲಿಕ್’ನ ಸಂಚಾಲಕಿ ದೀಕ್ಷಾ ಅಮೃತೇಶ್, ವಕೀಲ ಸದಾನಂದ ಗೌಡ, ಸಾಮಾಜಿಕ ಚಿಂತಕರಾದ ಜ್ಯೋತಿ ಕುಶಾಲನಗರ, ವಿ.ಎನ್.ಶಿವರಾಮ್ ಹಾಗೂ ಕೆ.ಆರ್.ರಮೇಶ್ ಉಪಸ್ಥಿತರಿದ್ದರು.