ಬೆಂಗಳೂರಿನಲ್ಲಿ ವಿಶ್ವಕಪ್ ನೋಡುವ ಕ್ರಿಕೆಟ್‌ ಪ್ರೇಮಿಗಳಿಗೆ ಭರ್ಜರಿ ಆಫರ್‌ ಕೊಟ್ಟ ನಮ್ಮ ಮೆಟ್ರೋ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ವಿಶ್ವಕಪ್‌ ಪಂದ್ಯಗಳನ್ನು ವೀಕ್ಷಣೆ ಮಾಡಲು ಹೋಗುವ ಕ್ರಿಕೆಟ್‌ ಪ್ರೇಮಿಗಳಿಗೆ ನಮ್ಮ ಮೆಟ್ರೋ ರೇಲ್‌ ಕಾರ್ಪೋರೇಷನ್‌ ಲಿ (ಬಿಎಂಆರ್‌ಸಿಎಲ್‌) ಭರ್ಜರಿ ಆಫರ್‌ ನೀಡಿದ್ದು, ಪಂದ್ಯ ವೀಕ್ಷಿಸಿ ವಾಪಸ್‌ ಹೋಗುವ ಯಾವುದೇ ರಿಟರ್ನ್‌ ಟಿಕೆಟ್‌ಗೆ ಕೇವಲ 50 ರೂ. ನಿಗದಿ ಮಾಡಲಾಗಿದೆ.

ನಮ್ಮ ಮೆಟ್ರೋ ವತಿಯಿಂದ ವಿಶೇಷ ಟಿಕೆಟ್ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಂಗಳೂರುನಲ್ಲಿ ವರ್ಲ್ಡ್ ಕಪ್ ಪಂದ್ಯಾವಳಿಗಳು ಅಕ್ಟೋಬರ್ 20, 26 ನೇ ಹಾಗೂ ನವೆಂಬರ್ 4, 9ನೇ ಮತ್ತು ನವೆಂಬರ್ 12, 2023 ರಂದು ನಡೆಯಲಿವೆ. ಈ ವೇಳೆ ಪಂದ್ಯ ವೀಕ್ಷಣೆಗೆ ಬರುವ ಕ್ರಿಕೆಟ್‌ ಪ್ರೇಮಿಗಳಿಗೆ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಗಳನ್ನು ಆಯಾ ದಿನಗಳಲ್ಲಿ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿಯೂ ಬೆಳಗ್ಗೆ 7.00 ಗಂಟೆಯಿಂದ ವಿತರಣೆ ಮಾಡಲಾಗುತ್ತದೆ.

ಮೆಟ್ರೋ ನಿಲ್ದಾಣದಲ್ಲಿ ವಿತರಣೆ ಮಾಡಲಾಗುವ ರಿಟರ್ನ್‌ ಜರ್ನಿಯ ಕಾಗದದ ಟಿಕೆಟ್‌ಗಳು ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ, ಸಂಜೆ 4.00 ಗಂಟೆಯ ನಂತರ ಒಂದು ಪುಯಾಣಕ್ಕೆ ಮಾತ್ರ ಮಾನ್ಯವಾಗಿರುತ್ತದೆ. ಕಾಗದದ ಟಿಕೆಟ್ ಬೆಲೆ 50 ರೂ. ಆಗಿರುತ್ತದೆ.

ಇನ್ನು ಸಾಮಾನ್ಯ ದರದ ಶೇ.5 ರಷ್ಟು ರೀಯಾಯಿತಿ ಕ್ಯೂ ಆರ್ ಕೋಡ್ ಟಿಕೆಟ್ ಗಳನ್ನು ಖರೀದಿಸಿದರೆ ಪಂದ್ಯಗಳು ನಡೆಯುವ ದಿನಗಳಲ್ಲಿ ಆದಿನದಂದು ಪ್ರಯಾಣಿಸಲು ಮಾತ್ರ ಮಾನ್ಯವಾಗಿರುತ್ತದೆ. ಕ್ಯೂ ಆರ್ ಟಿಕೆಟ್ಗಳನ್ನು ವಾಟ್ಸ್ ಅಪ್ ಅಥವಾ ನಮ್ಮ ಮೆಟ್ರೋ ಆಪ್ ಇಲ್ಲವೇ ಪೆಟಿಎಂ ಮೂಲಕ ಕ್ರಿಕೆಟ್ ಪಂದ್ಯಾವಳಿಗಳು ಪ್ರಾರಂಭವಾಗುವ ಮೊದಲು ಮುಂಗಡವಾಗಿ ಖರೀದಿಸಿದರೆ ಯಾವುದೇ ಅಡಚಣೆ ಇಲ್ಲದ ಹಿಂದಿರುಗುವ ಪ್ರಯಾಣಕ್ಕೆ ಬಳಸಬಹುದು. ಸ್ಮಾರ್ಟ್ ಕಾರ್ಡ್ ಮತ್ತು ಎನ್‌ಸಿಎಂಸಿ ಕಾರ್ಡ್‌ಗಳನ್ನು ಉಪಯೋಗಿಸಬಹುದು. ಪ್ರಯಾಣಿಕರು ಈ ಅವಕಾಶವನ್ನು ಉಪಯೋಗಿಸಿಕೊಳ್ಳುವ ಮೂಲಕ ಕಬ್ಬನ್ ಪಾರ್ಕ್‌ ಮತ್ತು ಎಂ.ಜಿ ರಸ್ತೆಯ ಮೆಟ್ರೋ ಟಿಕೆಟ್ ಕೌಂಟರ್ ಗಳಲ್ಲಿ ಜನ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯಕಾರಿಯಾಗಲಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!