ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಕುರಿತು ಪರ-ವಿರೋಧ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ನಾಳೆ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಿರುವ ಅವರು, ಹೈಕಮಾಂಡ್ ನಾಯಕರ ಜೊತೆ ನಡೆಸಲಿರುವ ಪ್ರತ್ಯೇಕ ಮಾತುಕತೆ ಈಗ ಎಲ್ಲರ ಗಮನ ಸೆಳೆದಿದೆ.
ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಾತ್ರ ಈ ಸಭೆಗೆ ವಿಶೇಷ ಆಹ್ವಾನ ನೀಡಲಾಗಿದೆ. ಸಿದ್ದರಾಮಯ್ಯ ಅವರ ಜೊತೆಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ಹಿಮಾಚಲ ಪ್ರದೇಶದ ಸಿಎಂ ಸುಖುವಿಂದರ್ ಸಿಂಗ್ ಕೂಡ ಭಾಗವಹಿಸಲಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ, ಮನರೇಗಾ ಕಾಯ್ದೆ ವಿಚಾರ ಹಾಗೂ ವೋಟ್ ಚೋರಿ ಹಗರಣಗಳ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಮುಂದಿನ ಹೋರಾಟದ ರೂಪುರೇಷೆಗಳನ್ನು ಈ ಸಭೆಯಲ್ಲಿ ಸಿದ್ಧಪಡಿಸಲಾಗುತ್ತದೆ.
ಕಾರ್ಯಕಾರಿ ಸಭೆಯ ನಂತರ ಸಿದ್ದರಾಮಯ್ಯ ಅವರು ಎಐಸಿಸಿ ನಾಯಕರನ್ನು ಭೇಟಿ ಮಾಡಲಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ‘ಮುಂದಿನ ಸಿಎಂ’ ಗೊಂದಲಗಳ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

