ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಕಕಾಲದಲ್ಲಿ 500 ಜನರನ್ನು ಬಲಿತೆಗೆದುಕೊಂಡ ಗಾಜಾದ ಅಲ್-ಅಹ್ಲಿ ಆಸ್ಪತ್ರೆಯ ಮೇಲೆ ನಡೆದ ದಾಳಿಯಿಂದ ಇಡೀ ವಿಶ್ವವೇ ಬೆಚ್ಚಿಬಿದ್ದಿತ್ತು. ಈ ದಾಳಿಯ ಬಗ್ಗೆ ಹಮಾಸ್-ಇಸ್ರೇಲ್ ಪರಸ್ಪರ ದೂಷಿಸುತ್ತಿರುವ ಬೆನ್ನಲ್ಲೇ, ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬುದಕ್ಕೆ ಇಸ್ರೇಲ್ ಸಾಕ್ಷಿ ತೋರಿಸಿದೆ.
ವೈಮಾನಿಕ ದಾಳಿಯಿಂದ ಸ್ಫೋಟ ಸಂಭವಿಸಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದಿರುವ ಇಸ್ರೇಲ್, ಹಮಾಸ್ ಭಯೋತ್ಪಾದಕರು ಇಸ್ಲಾಮಿಕ್ ಜಿಹಾದ್ ನಾಯಕನೊಂದಿಗೆ ರಾಕೆಟ್ ಮಿಸ್ ಫೈರ್ ಕುರಿತು ಚರ್ಚಿಸುತ್ತಿರುವ ಆಡಿಯೋ ರೆಕಾರ್ಡಿಂಗ್ ಅನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಬಿಡುಗಡೆ ಮಾಡಿದೆ.
ಇಸ್ರೇಲ್‌ನತ್ತ ಇಸ್ಲಾಮಿಕ್ ಜಿಹಾದ್ ಉಗ್ರಗಾಮಿಗಳು ಉಡಾವಣೆ ಮಾಡಿದ ರಾಕೆಟ್ ತಪ್ಪಾಗಿ ಆಸ್ಪತ್ರೆಗೆ ಅಪ್ಪಳಿಸಿತು ಎಂದು ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರರು ತಿಳಿಸಿದ್ದಾರೆ. ʻಇಸ್ಲಾಮಿಕ್ ಜಿಹಾದ್ʼ ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ಯಾಲೇಸ್ಟಿನಿಯನ್ ಭಯೋತ್ಪಾದಕ ಸಂಘಟನೆಯಾಗಿದೆ. ಹಮಾಸ್‌ನಿಂದ ದಾಳಿ ಆರೋಪಗಳನ್ನು ಎದುರಿಸಿದ ಬಳಿಕ ಇಸ್ರೇಲ್ ಈ ಸಾಕ್ಷಿಯನ್ನು ತೋರಿಸಿತು.